

ಮನೆಯೊಂದಕ್ಕೆ ದರೋಡೆಕೊರರು ನುಗ್ಗಿ ನಗ ನಗದು ದರೋಡೆ ಮಾಡಿದ ಘಟನೆ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಸಮೀಪದ ನೂಜೆ ತುಕ್ರಪ್ಪ ಶೆಟ್ಟಿ ಎಂಬವರ ಮನೆಗೆ ಸುಮಾರು ಒಂಭತ್ತು ಮಂದಿ ದರೋಡೆಕೋರರ ತಂಡ ನುಗ್ಗಿ ಮನೆಯ ಯಜಮಾನ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಗನಗದು ದೋಚಿರುವುದಾಗಿ ದೂರಲಾಗಿದೆ.ತುಕ್ರಪ್ಪ ಶೆಟ್ಟಿ ಅವರ ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮನೆಯಲ್ಲಿ ಪತಿ , ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಈ ಸಂದರ್ಭದಲ್ಲಿ ಇದ್ದುದರಿಂದ ಇವರನ್ನು ಬೆದರಿಸಿ ದರೋಡೆ ನಡೆಸಿರುವುದಾಗಿ ತಿಳಿದುಬಂದಿದೆ.ಈ ಬಗ್ಗೆ ಮಾಹಿತಿ ಅರಿತ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಮನೆಗೆ ಧಾವಿಸಿದ್ದಾರೆ. ನೂಜೆ ತುಕ್ರಪ್ಪ ಶೆಟ್ಟಿ ವಿಶ್ವ ಹಿಂದೂ ಪರಿಷತ್ ನ ಕೊಕ್ಕಡ ವಲಯ ಅಧ್ಯಕ್ಷ ಎಂದು ತಿಳಿದುಬಂದಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.