Header Ads
Header Ads
Breaking News

ಮರಳುಗಾರಿಕೆ ಆರಂಭಕ್ಕೆ ಸರ್ಕಾರ ವಿಫಲ ಸರ್ಕಾರದ ವಿರುದ್ಧ, ಜನರ ಪರ ಬಿಜೆಪಿ ಪಾದಯಾತ್ರೆ ಕೋಟ ಶ್ರೀನಿವಾಸ ಪೂಜಾರಿ

 

ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ವಿಷಯದಲ್ಲಿ ಸರ್ಕಾರ ಕಣ್ಣು ಕಿವಿ ಇಲ್ಲದಂತಾಗಿದೆ. ಜಿಲ್ಲಾಡಳಿತ ಗಾಢನಿದ್ದೆಯಲ್ಲಿದೆ. ಮರಳುಗಾರಿಕೆ ಆರಂಭವಾಗದಿರುವುದರಿಂದ ನಿರ್ಮಾಣ ಕಾರ್ಮಿಕರು, ಸಾಂಪ್ರದಾಯಕ ಮರಳುಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರವನ್ನು ಎಚ್ಚರಿಸುವ ಸಲುವಾಗಿ, ಜನರ ಪರವಾಗಿ ಬಿಜೆಪಿ ಹಿಂದುಳಿದ ವರ್ಗ ಮೋರ್ಛಾ ಆಗಸ್ಟ್ ೧೬ರಂದು ಬುಧವಾರ ಮಾಬುಕಳದಿಂದ ಕುಂದಾಪುರದ ತನಕ ಪಾದಯಾತ್ರೆ ನಡೆಸಲಿದೆ. ಸಂಜೆ ೪ ಗಂಟೆಗೆ ಕುಂದಾಪುರದಲ್ಲಿ ಸಾರ್ವಜನಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕೋಟೇಶ್ವರದ ಶ್ರೀ ಶಾರದ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮರಳುಗಾರಿಕೆ ಸಮಸ್ಯೆಯನ್ನು ಪರಿಹರಿಸಬೇಕಾದ ಸರ್ಕಾರ ಮಲೇಶಿಯಾದಿಂದ ಮರಳು ತರಿಸುವ ಮಾತನಾಡುತ್ತಿದೆ. ಸ್ಥಳೀಯವಾಗಿ ಮರಳುಗಾರಿಕೆ ನಡೆಸುವುದರಂದ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ. ಮರಳುಗಾರಿಕೆಯನ್ನೆ ನಂಬಿಕೊಂಡು ಆದೆಷ್ಟೋ ಕುಟುಂಬಗಳು ಜೀವನ ನಡೆಸುತ್ತಿವೆ. ಇಲ್ಲಿನ ನದಿಗಳಲ್ಲಿ ಯಥೇಚ್ಚ ಪ್ರಮಾಣದ ಮರಳು ಇದೆ. ಮರಳು ತಗೆಯದಿದ್ದರೆ ಮೀನುಗಾರರಿಗೆ ತೊಂದರೆಯಾಗುತ್ತದೆ. ಮಲೇಶಿಯಾದಿಂದ ಮರಳು ತರಿಸುತ್ತೇವೆ ಎನ್ನುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಜಿಲ್ಲೆಯಲ್ಲಿ ಪ.ಜಾತಿ, ಪ.ಪಂಗಡ, ನಿರುದ್ಯೋಗಿಗಳಿಗೆ ಆಯಾಯ ಗ್ರಾಮದಲ್ಲಿ ಮರಳುಗಾರಿಕೆಗೆ ಅವಕಾಶ ಮಾಡಿಕೊಡಲಿ ಎಂದರು.

೯೪ಸಿ ಹಕ್ಕುಪತ್ರ ನೀಡುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ೩೪ಸಾವಿರ ಹೆಕ್ಟೇರು ಜನವಸತಿ ಇರುವ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎನ್ನುವ ಕಾರಣದಿಂದ ಹಕ್ಕುಪತ್ರ ನೀಡಲು ಆಗುತ್ತಿಲ್ಲ ಎನ್ನುವ ಪ್ರಸ್ತಾಪವನ್ನು ಜಿಲ್ಲಾಡಳಿತ ಸರ್ಕಾರಕ್ಕೆ ನೀಡಿದೆ. ಸರ್ಕಾರ ಸುಪ್ರೀಂಕೋರ್ಟಿನ ಸುತ್ತೋಲೆ ಬರಬೇಕು ಎನ್ನುತ್ತಿದೆ. ಕಾನೂನಾತ್ಮಕವಾದ ಸಮಸ್ಯೆಯನ್ನು ಪರಿಹಾರ ಮಾಡಿಕೊಂಡು ಬಡವರಿಗೆ ಹಕ್ಕುಪತ್ರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಪಡಿತರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜಿಲ್ಲೆಯಲ್ಲಿ ೫,೫೦೦ ಪಡಿತರ ಚೀಟಿ ಸ್ಥಗಿತವಾಗಿದೆ. ಕಾರ್ಡ್ ಮುದ್ರಣ ಆಗುತ್ತಿಲ್ಲ. ಸಮಸ್ಯೆಯನ್ನು ಪರಿಹರಿಸಬೇಕಾದ ಆಹಾರ ಸಚಿವರು ಪ್ರಚಾರ ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸ್ಥಳೀಯವಾಗಿ ಮರಳುಗಾರಿಕೆ ಅವಕಾಶ ನೀಡಿದರೆ ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಸಾಂಪ್ರದಾಯಿಕ ಮರಳುಗಾರಿಕೆ ಅವಕಾಶ ನೀಡಲಿ. ಏಕರೂಪದ ಮರಳುಗಾರಿಕಾ ನೀತಿ ಅನುಷ್ಠಾನ ಮಾಡಲಿ. ಅದನ್ನು ಬಿಟ್ಟು ಮಲೇಶಿಯಾದಿಂದ ಮರಳು ತರಿಸಿಕೊಂಡರೆ ಜನರಿಗೆ ಇನ್ನೂ ಹೊರೆಯಾಗುತ್ತದೆ. ಮರಳುಗಾರಿಕೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸರ್ಕಾರದಿಂದ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಹಿಂದುಳಿದ ಮೋರ್ಛಾದ ಮುಖಂಡರಾದ ರಾಜೇಶ ಕಾವೇರಿ, ರವಿ ತಿಂಗಳಾಯ, ರಘು ಪೂಜಾರಿ ಉಪಸ್ಥಿತರಿದ್ದರು.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply