Header Ads
Header Ads
Breaking News

ಮಲ್ಪೆಯ ಬಂದರಿನಲ್ಲಿ ಮೀನಿನ ಕೊರತೆ : ದೈವದ ಮೊರೆ ಹೋದ ಮೀನುಗಾರರು

ಏಷ್ಯಾದ ಅತೀ ದೊಡ್ಡ ಬಂದರಿನಲ್ಲಿ ಈಗ ಮೀನಿನ ಕ್ಷಾಮ ಎದುರಾಗಿದೆ. ಕೋಟ್ಯಾಂತರೆ ರೂ ವಹಿವಾಟಾಗುವ ಮಲ್ಪೆ ಬಂದರಿನಲ್ಲಿ ಮೀನಿನ ಕೊರತೆ ಉಂಟಾಗಿದ್ದು ಇದೀಗ ಮೀನುಗಾರರು ಕಂಗಾಲಾಗಿ ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.ವಾಯ್ಸ್-ಗಂಟೆನಾದ, ವಾದ್ಯ ವಾಲಗದ ಅಬ್ಬರ, ಆವೇಶ ಇದು ಕರಾವಳಿಯ ಮೀನುಗಾರರು ಅತಿಯಾಗಿ ನಂಬುವ ಬೊಬ್ಬರ್ಯ ದೈವದ ದರ್ಶನ ಸೇವೆಯ ದೃಶ್ಯ. ಬಗೆಹರಿಸಲಾಗದ ಸಮಸ್ಯೆ ಬಂದರೆ ಮೀನುಗಾರರು ಬೊಬ್ಬರ್ಯ ದೈವಕ್ಕೆ ಶರಣು ಹೋಗುತ್ತಾರೆ. ಹಿಂದೆಂದೂ ಕಂಡಿರದ ಸಂಕಟ ಪರ್ಸೀನ್ ಮೀನುಗಾರ ಸಮುದಾಯವನ್ನು ಕಾಡುತ್ತಿದೆ. ಎಷ್ಟೇ ಬಲೆ ಬೀಸಿದರು ಮೀನೇ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಉಪಯೋಗಕ್ಕಿಲ್ಲದ ಕಾರ್ಗಿಲ್ ಮೀನು, ಜೆಲ್ಲಿ ಪಿಶ್ ಬಲೆ ಸೇರುತ್ತಿದೆ. ಈ ಮೀನುಗಳು ಸಮುದ್ರದಲ್ಲಿ ಸಿಕ್ಕರೆ ಗಂಡಾಂತರ ಕಾದಿದೆ ಅಂತಾನೇ ಅರ್ಥ. ಮೀನನ್ನೇ ಆಹಾರವಾಗಿ ತಿನ್ನುವ ಕಾರ್ಗಿಲ್ ಮೀನು ಕಡಲಿನಲ್ಲಿದೆ ಅಂದರೆ ಗುಣಮಟ್ಟದ ಮೀನಿಗೆ ಬರಗಾಲ ಬಂದಿದೆ ಎಂದೇ ಅರ್ಥ. ಅದರಲ್ಲೂ ಕಾರ್ಗಿಲ್ ಮೀನು ಯಾರೂ ತಿನ್ನಲ್ಲ. ಕೆ.ಜಿ ಗೆ 20 ರುಪಾಯಿ ದರದಲ್ಲಿ ಫಿಶ್ ಮಿಲ್‌ಗೆ ಗೊಬ್ಬರ ಅಥವಾ ಎಣ್ಣೆ ಮಾಡಲು ಕೊಡಬೇಕಷ್ಟೇ.

ಕಡಲಿನಲ್ಲಿ ಮೀನಿನ ಬೇಟೆಗೆ ಹೋಗುವ ಮೀನುಗಾರರಿಗೆ ವಿಚಿತ್ರ ವಿದ್ಯಮಾನವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಇಷ್ಟೊತ್ತಿಗಾಗಲೇ ಮಳೆಯ ನೀರು ಸೇರಿ ಕಡಲಿನ ನೀರು ತಂಪಾಗಬೇಕಿತ್ತು. ರಾಜ್ಯದಲ್ಲೇ ಅತೀಹೆಚ್ಚು ಮಳೆ ಉಡುಪಿಗೆ ಬಂದರೂ ಸಮುದ್ರದ ನೀರಿನ ಉಷ್ಣಾಂಶ ಇನ್ನೂ ಇಳಿಮುಖವಾಗಿಲ್ಲ. ನೀರು ತಂಪಾಗದೆ ಆಳದಲ್ಲಿರುವ ಮೀನುಗಳು ಸಮುದ್ರದ ಮೇಲ್ಮಟ್ಟಕ್ಕೆ ಬರೋದಿಲ್ಲ. ಪರ್ಸೀನ್ ಬೋಟುಗಳು ಕೇವಲ 120ಮೀಟರ್ ಆಳದಲ್ಲಷ್ಟೇ ಮೀನುಗಾರಿಕೆ ನಡೆಸೋದರಿಂದ ಮೀನುಗಳೇ ಬಲೆಗೆ ಸಿಗುತ್ತಿಲ್ಲ. ಈ ರೀತಿ ಹಿಂದೆಂದೂ ಆಗಿಲ್ಲ. ಈ ತಲೆಮಾರಿನಲ್ಲಿ ಇಂತಹಾ ವಿದ್ಯಮಾನ ನಡೆದಿಲ್ಲ ಅಂತಾರೆ ಮೀನುಗಾರರು. ಸಂಕಷ್ಟದಿಂದ ಬೇಸತ್ತ ಇವರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ. ದೈವದ ದರ್ಶನ ನಡೆಸಿ ಕಷ್ಟ ತೋಡಿಕೊಂಡಿದ್ದಾರೆ. ಪ್ರಾಕೃತಿಕ ವಿಕೋಪಗಳು ಬಂದಾಗಲೆಲ್ಲಾ ಮೀನುಗಾರರನ್ನು ಸಲಹುವ ಬೊಬ್ಬರ್ಯ ದೈವದ ಅಭಯ ಪಡೆದಿದ್ದಾರೆ.

ನಲ್ವತ್ತರಿಂದ ಅರವತ್ತು ಲಕ್ಷ ರುಪಾಯಿ ಸಾಲ ಮಾಡಿ ಪರ್ಸೀನ್ ಬೋಟುಗಳನ್ನು ಕಡಲಿಗಿಳಿಸಲಾಗಿದೆ. ಮೀನು ಸಿಗದಿದ್ದರೆ ಹಾಕಿದ ಬಂಡವಾಳೆವೆಲ್ಲಾ ನಷ್ಟವಾಗುತ್ತೆ. ಆಗಸ್ಟ್ ನಿಂದ ನಯಾಪೈಸೆ ಲಾಭವಿಲ್ಲದ ಮೀನುಗಾರಿಕೆ ನಡೆಸಿ ಇದೀಗ ಕೊನೆಯ ಒಂದು ತಿಂಗಳಾದರೂ ಉತ್ತಮ ಮೀನು ಸಿಗಲಿ ಎಂಬ ಬಯಕೆ ಇವರದ್ದು. ಬೊಬ್ಬರ್ಯನ ಅಭಯ ಕೈ ಹಿಡಿಯುತ್ತಾ? ಸರ್ಕಾರವೇನಾದರೂ ಪರಿಹಾರ ನೀಡುತ್ತಾ ಕಾದುನೋಡಬೇಕು.

Related posts

Leave a Reply

Your email address will not be published. Required fields are marked *