Header Ads
Header Ads
Breaking News

ಪದೇ ಪದೇ ಕರೆಂಟ್ ತೆಗೆಯುವುದರಿಂದ ತೊಂದರೆಯಾಗುತ್ತಿದೆ : ಬೆಳುವಾಯಿ ಗ್ರಾಮಸಭೆಯಲ್ಲಿ ಮಹಿಳೆಯ ಆಗ್ರಹ

 ನಾವು ಬೀಡಿ ಕಟ್ಟಿ ಜೀವನ ನಡೆಸುವವರು. ನಾನು ನನ್ನ ಮನೆಯಲ್ಲಿ ಇಲ್ಲದಿದ್ದರೂ ನನಗೆ ಅಧಿಕ ಕರೆಂಟ್ ಬಿಲ್ಲು ಬರುತ್ತಿದೆ. ಕರೆಂಟು ಬಿಲ್ಲು ಕಟ್ಟಲು ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಬೀಡಿಯೇ ನಮಗೆ ಜೀವನಾಧಾರ ಆದರೆ ರಾತ್ರಿ ಪದೇ ಪದೇ ಕರೆಂಟು ತೆಗೆಯುವುದರಿಂದ ನಮಗೆ ತೊಂದರೆಯಾಗುತ್ತಿದೆ ಆದ್ದರಿಂದ ರಾತ್ರಿ 12ಗಂಟೆಯ ನಂತರ ಕರೆಂಟ್ ತೆಗೆಯಿರಿ ಎಂದು ಮಹಿಳೆಯೊಬ್ಬರು ಮೆಸ್ಕಾಂ ಅಧಿಕಾರಿಯಲ್ಲಿ ಬೆಳುವಾಯಿ ಗ್ರಾಮಸಭೆಯಲ್ಲಿ ಆಗ್ರಹಿಸಿದ್ದಾರೆ.

ಅವರು ಬೆಳುವಾಯಿ ಗ್ರಾ.ಪಂಚಾಯತ್‌ನ ಸಭಾಭವನದಲ್ಲಿ ನಡೆದ ಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡಿದರು. ಕರೆಂಟ್ ಬಿಲ್ಲನ್ನು ನೀವು ಸರಿಯಾದ ಸಂದರ್ಭದಲ್ಲಿ ಕಳುಹಿಸುತ್ತೀರಿ ಆದರೆ ಕರೆಂಟ್ ಮಾತ್ರ ಸರಿಯಾಗಿ ನೀಡುತ್ತಿಲ್ಲವೆಂದು ವಾರಿಜಾ ಶೆಟ್ಟಿ ಆರೋಪಿಸಿದರು.

ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದಾದ ಚಿಕಿತ್ಸೆಗಳ ಬಗ್ಗೆ ಯಾರೂ ಸರಿಯಾದ ಮಾಹಿತಿ ನೀಡದೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಈ ಬಗ್ಗೆ ಸಭೆಗೆ ಸರಿಯಾದ ಮಾಹಿತಿ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದಾಗ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಬಗ್ಗೆ ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತೇಶ್ ಮಾಹಿತಿ ನೀಡುತ್ತಾ ಈ ಕಾರ್ಡ್ ಹೊಂದಿರುವವರು ಮೊದಲು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಬೇಕು. ಸೂಚಿತ ಕಾಯಿಲೆಗೆ ಅಲ್ಲಿ ಚಿಕಿತ್ಸೆ ಲಭ್ಯ ಇಲ್ಲದಿದ್ದಾಗ ವೈದ್ಯಾಧಿಕಾರಿಯ ಶಿಫಾರಸು ಪತ್ರ ಪಡೆದು ನೊಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.
ಒಂದು ಹೈಮಾಸ್ಟ್ ದೀಪದಿಂದ ಪಂಚಾಯತಿಗೆ 7ರಿಂದ 8 ಸಾವಿರದವರೆಗೆ ವಿದ್ಯುತ್ ಬಿಲ್ಲು ಬರುತ್ತಿದೆ. ಕೆಸರ್‌ಗದ್ದೆ, ಕರಿಯನಂಗಡಿ ಮತ್ತು ಕಾಂತಾವರ ಕ್ರಾಸ್ ಬಳಿ ಸೇರಿದಂತೆ ಮೂರು ಹೈಮಾಸ್ಟ್ ದೀಪಗಳಿದ್ದು ಪಂಚಾಯತಿಗೆ ವಿದ್ಯುತ್ ಬಿಲ್ಲಿನ ಹೊರೆಯಾಗುತ್ತಿದೆ. ಕೆಸರ್‌ಗದ್ದೆ ಹೈಮಾಸ್ಟ್ ದೀಪಕ್ಕೆ ಮಾತ್ರ ಪಂಚಾಯತಯಿಂದ ನಿರಾಕ್ಷೇಪಣೆ ಪತ್ರ ಇದೆ. ಉಳಿದಂತೆ ಮಸೀದಿ ಬಳಿ ಮತ್ತು ಚರ್ಚ್ ಬಳಿ ಇರುವ ಹೈಮಾಸ್ಟ್ ದೀಪಗಳನ್ನು ಸ್ಥಳೀಯ ಧಾರ್ಮಿಕ ಕೇಂದ್ರದ ಆವರಣದೊಳಗೆ ಸ್ಥಳಾಂತರಿಸಿಕೊಂಡು ಅವರೆ ವಿದ್ಯುತ್ ಬಿಲ್ಲು ಕಟ್ಟಲು ಒಪ್ಪುವುದಾದರೆ ಉಳಿಸಿಕೊಳ್ಳಲಾಗುವುದು, ಇಲ್ಲದಿದ್ದಲ್ಲಿ ವಾರ್ಡ್ ಸಭೆಯಲ್ಲಾದ ನಿರ್ಣಯದಂತೆ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್ ತಿಳಿಸಿದರು.

ಪಂಚಾಯತ್ ಉಪಾಧ್ಯಕ್ಷೆ ರಮಣಿ ಆಳ್ವ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ವಿಸ್ತರಣಾಧಿಕಾರಿ ದಯಾನಂದ ಶೆಟ್ಟಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *