
ವಿಟ್ಲ: ಮೆಸ್ಕಾಂ ಇಲಾಖೆಯ ಗ್ರಾಹಕರ ಮೇಲಿನ ದೌರ್ಜನ್ಯ ಹಾಗೂ ಕಾನೂನು ವಿರೋಧಿ ವರ್ತನೆಯ ವಿರುದ್ಧ ವಿಟ್ಲ ಮೆಸ್ಕಾಂ ಕಛೇರಿಯ ಮುಂಭಾಗದಲ್ಲಿ ಡಿ.16ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಗ್ರಾಹಕರ ಬಿಲ್ ಗಳಿಗೆ ಯಾವುದೇ ರೀತಿಯಲ್ಲಿ ಬಡ್ಡಿ ವಿಧಿಸುವ ಹಕ್ಕಿಲ್ಲವಾದರೂ ಪೈನಾನ್ಸ್ ರೀತಿಯಲ್ಲಿ ಬಡ್ಡಿ ವಿಧಿಸಲಾಗುತ್ತಿದೆ. ಬಿಲ್ ಪಾವತಿಸದಿದ್ದರೆ ನೋಟೀಸೂ ನೀಡದೆ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.ಪ್ರತಿಭಟನೆಯಲ್ಲಿ ಎಲ್ಲಾ ವಿದ್ಯುತ್ ಗ್ರಾಹಕರು ಆಗಮಿಸಿ, ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಡಿ.16ರಂದು ಒಂದು ದಿನದ ಮಟ್ಟಿಗೆ ಗ್ರಾಹಕರು ಮೆಸ್ಕಾಂ ನ ಯಾವುದೇ ಬಿಲ್ ಪಾವತಿ ಮಾಡದೆ ಪ್ರತಿಭಟನೆಗೆ ಸಹಕಾರವನ್ನು ನೀಡಬೇಕೆಂದು ವಿನಂತಿಸಿದರು.ಕಾಂಗ್ರೆಸ್ ಮುಖಂಡ ಎಂ. ಎಸ್. ಮಹಮ್ಮದ್ , ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಉಪಸ್ಥಿತರಿದ್ದರು.