Header Ads
Breaking News

ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಪ್ರೇಮಾನಂದ ಶೆಟ್ಟಿ; ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜನತೆಗೆ ನೀಡಿದ್ರು ಗುಡ್ ನ್ಯೂಸ್..!

ಮಂಗಳೂರು ನಗರದಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳ ಜತೆಯಲ್ಲೇ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತನ್ನ ಅವಧಿಯಲ್ಲಿ ಪ್ರಯತ್ನಿಸುವುದಾಗಿ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಭರವಸೆ ನೀಡಿದ್ದಾರೆ.

ಮನಪಾ ಕಚೇರಿಯ ಮೇಯರ್ ಕೊಠಡಿಯಲ್ಲಿಂದು ನಿಕಟಪೂರ್ವ ಮೇಯರ್ ದಿವಾಕರ ಪಾಂಡೇಶ್ವರ ಅವರಿಂದ ಅಧಿಕಾರ ವಹಿಸಿಕೊಂಡ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಸದ್ಯ ಸಾರ್ವಜನಿಕರು ಮಾತನಾಡುತ್ತಿದ್ದು, ಈ ಯೋಜನೆ ಮಂಗಳೂರಿಗೆ ದೊರಕುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಯಾವ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತೋ ಅದೇರೀತಿಯಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಈಗಿರುವ ಗುತ್ತಿಗೆದಾರರ ಅವಧಿಯು ಪೂರ್ಣಗೊಳ್ಳುವ ಹಂತದಲ್ಲಿದ್ದು, ಸರಕಾರದ ಮಾರ್ಗಸೂಚಿಯಂತೆ ಹೊರ ಗುತ್ತಿಗೆ ಅಥವಾ ನೇರ ನೇಮಕಾತಿ ಮೂಲಕ ಪೌರ ಕಾರ್ಮಿಕರ ನೇಮಕದ ಕುರಿತಂತೆ ಪಾಲಿಕೆ ಆಯುಕ್ತರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿ ಎಂಟು ವಾರ್ಡ್‌ಗಳಲ್ಲಿ ಡ್ರೋನ್ ಸರ್ವೇ ನಡೆಸಲಾಗಿದೆ. ಒತ್ತುವರಿ ಇದರಿಂದ ಸ್ಪಷ್ಟವಾಗಿ ಕಂಡುಹಿಡಿಯಬಹುದಾಗಿದ್ದು, ಒತ್ತುವರಿ ಆಗಿರುವಲ್ಲಿ ತೆರವುಗೊಳಿಸಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು. ಇದೇ ವೇಳೆ ಉಪ ಮೇಯರ್ ಸುಮಂಗಳಾ ಕೂಡಾ ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ನಿಕಟಪೂರ್ವ ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *