

ಮಂಗಳೂರು, ರಥಬೀದಿ ಮತ್ತು ಅನ್ವೇಷಣಾ ಸಂಘ, ವಿಶ್ವ ವಿದ್ಯಾನಿಲಯ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಕುವೆಂಪು ರವರ 116 ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಭಾಗವಾಗಿ ಇಂದಿನ ಯುವಜನತೆಗೆ ಕುವೆಂಪುರವರ ಕೆಲವು ಕೃತಿಗಳ ಪರಿಚಯ, ಕವನ ವಾಚನ, ನುಡಿ ನಮನ ಹಾಗು ಕಾವ್ಯ ವಿಮರ್ಶೆಯನ್ನು ಹಮ್ಮಿಕೊಳ್ಳಲಾಯಿತು.ಹಲವಾರು ವಿದ್ಯಾರ್ಥಿಗಳು ಸ್ವರಚಿತ ಹಾಗು ಕುವೆಂಪು ರಚಿತ ಕವನ ವಾಚನ ಮಾಡಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು.ಅನ್ವೇಷಣಾ ಸಂಘದ ಸಹ ನಿರ್ದೆಶಕರಾದ ಡಾ. ಸಿದ್ದರಾಜುರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ, ಕುವೆಂಪುರವರ ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಯ ಬಗ್ಗೆ ತಿಳಿಸುತ್ತಾ ಕುವೆಂಪುರವರ ಪ್ರಸಿದ್ಧ ಕವನಗಳ ನೆನಪನ್ನು ಮರುಕಳಿಸುವಂತೆ ಮಾಡಿದರು.
ಕುಮಾರಿ ವೃಂದಾರವರು ಕುವೆಂಪುರವರ ಜೀವನ ಚರಿತ್ರೆಯ ಸಚಿತ್ರ ಪರಿಚಯ ನೀಡಿದರು.ನಂತರ ಕು. ಗೌತಮಿ, ಚೇತನ್, ಮೇಲರಿನ್, ಸ್ಪೂರ್ತಿ, ಅನುಷಾ. ಆರ್., ಮಧುರ, ಅನುಷಾ ಕೆ ಡಿ, ವಿಜಯಲಕ್ಷ್ಮಿ, ಶರಣ್ ಕುಮಾರ್, ಅನುಪ್ರಿಯಾ ಮತ್ತಿತರರು ಕವಿಗೋಷ್ಠಿಯಲ್ಲಿ ಪಾಲ್ಗೊಂಡರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ರಾಜಶೇಖರ ಹೆಬ್ಬಾರ್ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ದಾರ್ಶನಿಕ ಕವಿ, ರಸಋಷಿ ಕುವೆಂಪು ಎಲ್ಲಾ ಕಾಲದಲ್ಲೂ ಎಲ್ಲಾ ಜನಾಂಗ, ಎಲ್ಲಾ ಪೀಳಿಗೆಗೂ ಪ್ರಸ್ತುತರಾಗಿದ್ದಾರೆಂದರು. ಡಾ. ರವಿಕುಮಾರ. ಎಂ.ಪಿ. ಸರ್ವರನ್ನು ಸ್ವಾಗತಿಸುತ್ತ ಕುವೆಂಪುರವರ “ಓ ನನ್ನ ಚೇತನಾ” ಕವನವನ್ನು ಸುಮಧುರವಾಗಿ ಹಾಡಿದರು. ಶಾಂತಮೂರ್ತಿ ಹೀರೆಮಠ ಅವರ ಉಸ್ತುವಾರಿಯಲ್ಲಿ ಜರುಗಿದ ಈ ಕಾರ್ಯಕ್ರಮವು ಅನುಷಾರವರ ಪ್ರಾರ್ಥನೆಯೊಂದಿಗೆ ಆರಂಭವಾಗಿ ವೃಂದಾರವರ ನಿರೂಪಣೆಯೊಂದಿಗೆ ಸಾಗಿ ವಿಜೀತ್.ಜೆ. ಯವರ ಧನ್ಯವಾದಗಳೊಂದಿಗೆ ಮುಗಿಯಿತು.