Header Ads
Breaking News

ರಸ್ತೆ ಇಲ್ಲದೆ ಪರದಾಡುತ್ತಿರುವ ಹತ್ತು ಕುಟುಂಬಸ್ಥರು : ಅಡ್ಯಾಲು-ಕುಳ ಪ್ರದೇಶದ ಜನರ ಗೋಳು ಕೇಳುವವರಿಲ್ಲ

ಪುತ್ತೂರು: ಮೂಲ ಸೌಕರ್ಯಗಳಲ್ಲಿ ನೀರು, ವಸತಿ ಸಹಿತ ರಸ್ತೆಯೂ ಪ್ರಮುಖವಾಗಿದ್ದು, ಆದರೆ ಸುಮಾರು 10ಕ್ಕೂ ಅಧಿಕ ಮನೆಗಳಿರುವ ಇಲ್ಲಿ ಕಳೆದ 50 ವರ್ಷಗಳಿಂದ ನಡೆದಾಡಲೂ ಸರಿಯಾದ ದಾರಿಯಿಲ್ಲದೆ ಪರದಾಡುತ್ತಿದ್ದಾರೆ. ನಮಗೆ ರಸ್ತೆ ಮಾಡಿ ಕೊಡಿ ಎಂದು ಪ್ರಧಾನಿ, ಮುಖ್ಯಮಂತ್ರಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಪರಿಹಾರ ದೊರಕಿಲ್ಲ ಎಂಬುದು ಇಲ್ಲಿನ ಜನರ ಅಳಲು. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯತಿಗೊಳಪಟ್ಟ ಅಡ್ಯಾಲು ನಿವಾಸಿಗಳ ನೋವಿನ ಕಥೆ. ಅಡ್ಯಾಲುವಿನಲ್ಲಿ ಸುಮಾರು 10 ಮನೆಗಳಿದ್ದು, ಈ ಮನೆಗೆ ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ. ಮಳೆಗಾಲದಲ್ಲಂತೂ ಇವರ ಸಂಕಷ್ಟ ಹೇಳತೀರದಂತಿದೆ. ಪುತ್ತೂರು ಕಬಕ ರಸ್ತೆಯ ಕವಲು ದಾರಿಯಾದ ಅಡ್ಯಾಲು-ಕುಳ ರಸ್ತೆಯು ಸುಮಾರು 1ಕೀ.ಮೀ ಉದ್ದವಿದ್ದು ಈ ರಸ್ತೆಯಲ್ಲಿ ಕೊನೆಯ 200 ಮೀ.ನಷ್ಟು ವ್ಯಾಪ್ತಿಯಲ್ಲಿ ರಸ್ತೆಯಿಲ್ಲದೆ ಕಾಲು ದಾರಿಯಾಗಿ ಮಾರ್ಪಟ್ಟಿದೆ. ಇಲ್ಲಿ ಸರಿಯಾದ ವಾಹನ ಸಂಚಾರ ಯೋಗ್ಯವಾದ ರಸ್ತೆ ನಿರ್ಮಾಣ ಮಾಡುವಂತೆ ಕಳೆದ 50 ವರ್ಷಗಳಿಂದಲೂ ಇಲ್ಲಿನ ಜನರು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಪರಿಣಾಮ ಮಾತ್ರ ಶೂನ್ಯವಾಗಿದೆ.

ನಮಗೆ ರಸ್ತೆ ವ್ಯವಸ್ಥೆ ಕಲ್ಪಿಸಿ ಎಂದು ಇಲ್ಲಿನ ಜನರು ಪ್ರಧಾನಮಂತ್ರಿ, ಮುಖ್ಯಮಂತ್ರಿಗೂ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂಧಿಸಿದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯತ್‍ಗೆ ಸೂಚನೆ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಈ ಹಿಂದಿನ ಶಾಸಕರು ಹಾಗೂ ಈಗಿನ ಶಾಸಕರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ, ತಹಶೀಲ್ದಾರ್‍ಗೂ ನೀಡಿದ ಮನವಿಗೆ ಯಾವುದೇ ಸ್ಪಂಧನೆ ಸಿಕ್ಕಿಲ್ಲ, ಇಡ್ಕಿದು ಪಂಚಾಯತ್‍ಗೆ ನೀಡಿದ ಮನವಿಗಂತೂ ಲೆಕ್ಕವೇ ಇಲ್ಲ ಎನ್ನುತ್ತಾರೆ ಸ್ಥಳೀಯರು.
ನಮಗೆ ರಸ್ತೆ ಮಾಡಿ ಕೊಡದಿದ್ದಲ್ಲಿ ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಅಡ್ಯಾಲು ಕುಳದ ಎಲ್ಲಾ ಮತದಾರರೂ ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಬಹಿಷ್ಕಾರ ಕ್ಕೆ ಮುಂದಾಗಿದ್ದರು. ಈ ಬಗ್ಗೆ ಬ್ಯಾನರ್ ಹಾಕಿ ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಆದರೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಆಗಿನ ಉಪವಿಭಾಗಾಧಿಕಾರಿಗಳು ರಸ್ತೆ ನಿರ್ಮಾಣದ ಮೌಖಿಕ ಭರವಸೆ ನೀಡಿ ಮತದಾನ ಬಹಿಷ್ಕಾರ ವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಅವರ ಭರವಸೆಯ ಮೇರೆಗೆ ಚುನಾವಣಾ ಬಹಿಷ್ಕಾರದಿಂದ ಇವರು ಹಿಂದೆ ಸರಿದಿದ್ದರು. ಆದರೆ ಉಪವಿಭಾಗಾಧಿಕಾರಿಗಳು ನೀಡಿದ ಭರವಸೆ ವಿಧಾನಸಭೆ ಚುನಾವಣೆ ಕಳೆದು ವರ್ಷಗಳೇ ಕಳೆದರೂ, ಈ ತನಕ ಇವರ ಬಳಿಗೆ ಬಂದವರಿಲ್ಲ. ಇವರ ಸಮಸ್ಯೆಯನ್ನು ಕೇಳಿದವರಿಲ್ಲ ಎನ್ನುವುದು ಇವರ ಆರೋಪ.

ನಮಗೆ ರಸ್ತೆ ಯಾವತ್ತೋ ಆಗಬೇಕಿತ್ತು. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳಿಂದಾಗಿ ನಮ್ಮ ಬೇಡಿಕೆಗೆ ಬೆಲೆ ಸಿಕ್ಕಿಲ್ಲ. ಅಡ್ಯಾಲು-ಕುಳದಲ್ಲಿ ಎಂಡೋಸಲ್ಫಾನ್ ಪೀಡಿತರು, ವಿಕಲಚೇತನರು, ಬುದ್ಧಿಮಾಂಧ್ಯರು, ವೃದ್ಧರು, ಶಾಲಾ ಮಕ್ಕಳು ಹೀಗೆ ಎಲ್ಲಾ ತರದ ಜನರಿದ್ದೂ, ಮಕ್ಕಳಿಗೆ ಶಾಲೆಗೆ ಹೋಗಲು, ಅನಾರೋಗ್ಯ ಆದಾಗ ಆಸ್ಪತ್ರೆಗೆ ಹೋಗಲು ಪರದಾಡಬೇಕಾಗಿದೆ. ಮನೆ, ಇನ್ನಿತರ ಕಟ್ಟಡ ನಿರ್ಮಾಣಕ್ಕಂತೂ ಸಾಧ್ಯವೇ ಇಲ್ಲ. ಯಾಕೆಂದರೆ ನಿರ್ಮಾಣದ ಅಗತ್ಯ ಸಾಮಾಗ್ರಿಗಳನ್ನು ಸಾಗಿಸಲು ಆಗದ ಪರಿಸ್ಥಿತಿ ಇದೆ. ಇಲ್ಲಿನ 2 ಮನೆಗಳು ತೀರಾ ನಾದುರಸ್ತಿಯಲ್ಲಿದ್ದು ಬೀಳು ಸ್ಥಿತಿಯಲ್ಲಿದೆ. ಒಂದು ಮನೆಯವರು ಕಾಯಕಷ್ಟದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದರೂ ಕಳೆದ 3 ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ಬಾಕಿಯಾಗಿದೆ.

ನಾವು  ಅರ್ಜಿ, ಮನವಿ ಸಲ್ಲಿಸಿದ್ದರೂ ನಮ್ಮ ರಸ್ತೆ ಬೇಡಿಕೆ ಈಡೇರಿಲ್ಲ. ನಮ್ಮ ಬೇಡಿಕೆಗೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಈ ಹಿಂದೆಯೂ ಬೆಂಬಲ ನೀಡಿದೆ. ಇದೀಗ ನಮ್ಮ ಬೇಡಿಕೆಗೆ ಸ್ಪಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಸಹಕಾರ ಪಡೆದು ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Related posts

Leave a Reply

Your email address will not be published. Required fields are marked *