Header Ads
Breaking News

ರಾಷ್ಟ್ರೀಯ ಹೆದ್ದಾರಿ ಮಧ್ಯೆ ಉದ್ಭವವಾಗಿರುವ ಹೊಂಡಗುಂಡಿ: ಬಿ.ಸಿ ರೋಡ್‍ನ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ

ಬಂಟ್ವಾಳ: ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಉದ್ಭವವಾಗಿರುವ ಹೊಂಡಗಳಿಗೆ ಮುಕ್ತಿ ಸಿಗುವ ಲಕ್ಷಣ ಕಾಣುತ್ತಿಲ್ಲ. ಹೊಂಡ ಮುಚ್ಚಲು ಸಾರ್ವಜನಿಕರು, ಸಂಘಟನೆಗಳು ನಡೆಸಿದ ತಾತ್ಕಲಿಕ ವ್ಯವಸ್ಥೆಗಳೆಲ್ಲಾ ವಿಫಲವಾಗಿದೆ. ಹೊಂಡದ ಆಳ, ಅಗಲ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಎರಡು ದಿನದ ಮಳೆಗೆ ವಾರದ ಹಿಂದೆ ಹಾಕಿದ ತೇಪೆ ಕೊಚ್ಚಿ ಹೋಗಿದೆ. ಕೆರೆಯಂತೆ ನೀರು ತುಂಬಿಕೊಂಡಿರುವ ಈ ಮರಣಗುಂಡಿಗಳು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾಯಕಲ್ಪಕ್ಕಾಗಿ ಕಾಯುತ್ತಿವೆ.

ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಂಪೂರ್ಣ ನಿರ್ಲಕ್ಷಕ್ಕೆ ಗುರಿಯಾಗಿದೆ. ನಗರ ಕೇಂದ್ರದಲ್ಲಿಯೇ ಪ್ರತಿ ವರ್ಷ ರಸ್ತೆ ಸಂಪೂರ್ಣ ಹಾನಿಗೀಡಾಗುತ್ತಿದ್ದು ಈ ಬಾರಿಯಂತೂ ಕೆರೆ ಗಾತ್ರದ ಹೊಂಡಗಳು ನಿರ್ಮಾಣಗೊಂಡು ರಸ್ತೆಯನ್ನೆಲ್ಲಾ ಆಕ್ರಮಿಸಿಕೊಂಡಿದೆ. ಇಲ್ಲಿ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕೆನ್ನುವ ಕಾಳಜಿ ರಾಷ್ಟ್ರೀಯ ಹೆದ್ದಾರಿಗೆ ಇಲ್ಲ, ಜನರಿಗೆ ಉತ್ತಮ ರಸ್ತೆ ನೀಡುವುದು ನಮ್ಮ ಕರ್ತವ್ಯ ಎನ್ನುವ ಭಾವನೆ ಜನಪ್ರತಿನಿಧಿಗಳಲ್ಲೂ ಇಲ್ಲ, ಎಂತಹ ರಸ್ತೆಯಾದರೂ ಸರಿ ಪರವಾಗಿಲ್ಲ ಎನ್ನುವ ಜನರ ಹೊಂದಾಣಿಕೆಯ ಮನೋಭಾವನೆಯಿಂದಾಗಿ ಇಲಾಖೆಗೆ ಹೋರಾಟ, ಪ್ರತಿಭಟನೆಯ ಬಿಸಿಯೂ ಮುಟ್ಟಿಲ್ಲ. ಇದರಿಂದಾಗಿ ಪ್ರತಿ ವರ್ಷ ವಾಹನ ಚಾಲಕರು, ಪ್ರಯಾಣಿಕರು ಜೂನ್ ನಿಂದ ಡಿಸೆಂಬರ್ ವರೆಗೆ ಈ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಪಡಬೇಕು.
ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹೊಂಡ ಮುಚ್ಚುವ ಪ್ರಯತ್ನವಾಗಿ ತೇಪೆ ಕಾರ್ಯ ನಡೆದಿತ್ತು. ಇದು ಸಮಸ್ಯೆ ಪರಿಹರಿಸಲು ಮಾಡಿದ ಕಾರ್ಯ ಅಲ್ಲ, ಜನರ ಕಣ್ಣೊರೆಸುವ ತಂತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ತೇಪೆ ಹಾಕಿದ ಕೆಲವೇ ದಿನದಲ್ಲಿ ಅದು ಕಿತ್ತು ಹೋಗಿದೆ. ಕೆಲ ದಿನಗಳ ಹಿಂದೆಯಷ್ಟೇ ಪಾಣೆಮಂಗಳೂರು ಬಳಿ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳಿಗೆ ತೇಪೆ ಹಾಕುವ ಪ್ರಯತ್ನ ನಡೆದಿದೆ.ಅದೂ ಅಪೂರ್ಣವಾಗಿದೆ. ತೇಪೆ ಹಾಕಿದ ಹೊಂಡದ ಬಳಿಯೇ ಬೇರೆ ಹೊಂಡಗಳಿದ್ದರೂ ಎಲ್ಲಾ ಹೊಂಡಗಳಿಗೂ ತೇಪೆ ಹಾಕುವ ಬದಲು ಕೆಲವೊಂದು ಹೊಂಡಗಳನ್ನು ಮಾತ್ರ ಮುಚ್ಚಿ ಅಪೂರ್ಣ ದುರಸ್ತಿ ಮಾಡಲಾಗಿದೆ. ನೆಹರು ನಗರದ ಬಳಿ ವಾರದ ಹಿಂದೆಯಷ್ಡೇ ಹಾಕಿದ ತೇಪೆ ಕಿತ್ತು ಹೋಗಿದ್ದು ಗುಣಮಟ್ಟದ ಅಸಲಿತನ ಬಹಿರಂಗ ಗೊಂಡಿದೆ. ರಾಷ್ಟ್ರೀಯ ಹೆದ್ದಾರಿಗೆ ಯಾಕಾದರೂ ಟೋಲ್ ಪಾವತಿಸುತ್ತಿದ್ದೇವೆ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಹೆದ್ದಾರಿ ಇಲಾಖೆ ಉತ್ತರಿಸ ಬೇಕಾಗಿದೆ. ಮಳೆ ಇರುವಾಗ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ಸಿದ್ದ ಉತ್ತರ ನೀಡುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಮಳೆ ಇಲ್ಲದೆ ಇರುವಾಗ ಗಾಢ ನಿದ್ರೆಯಲ್ಲಿರುತ್ತಾರೆಯೇ? ಮಳೆಗಾಲದಲ್ಲೂ ಡಾಮಾರೀಕರಣ ಮಾಡುವ ಸುಧಾರಿತ ತಂತ್ರಜ್ಞಾನದ ವ್ಯವಸ್ಥೆಗಳು ಇರುವಾಗ ರಸ್ತೆ ದುರಸ್ತಿಗೆ ಇಲಾಖೆ ಮೀನ ಮೇಷ ನೀತಿ ಅನುಸರಿಸುತ್ತಿದೆ

Related posts

Leave a Reply

Your email address will not be published. Required fields are marked *