
ಹೊಸದಿಲ್ಲಿ : ಫೆ. 10 :ಅನ್ನದಾತನ ಹೋರಾಟದ ಪರವಾಗಿ ಭಾರತೀಯ ಚಿತ್ರರಂಗದ ಸಂವೇದನಾಶೀಲ ನಟರು ಮಾತನಾಡುತ್ತಿದ್ದಾರೆ. ಹಿರಿಯ ರಂಗಕಲಾವಿದ, ಬಾಲಿವುಡ್ ನಟ ನಾಸಿರುದ್ದೀನ್ ಶಾ ಕೂಡ ರೈತರ ಹೋರಾಟ ಬೆಂಬಲಿಸಿ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ:
ನಾಸಿರುದ್ದೀನ್ ಶಾ ಹೇಳಿರುವುದೇನು?
ಸಾವಿರಾರು ರೈತ ಸೋದರ-ಸೋದರಿಯರು, ಮಕ್ಕಳು ದೆಹಲಿಯ ಕೊರೆಯುವ ಚಳಿಯಲ್ಲಿ ನ್ಯಾಯ ಕೇಳಲು, ತಮ್ಮ ಹಕ್ಕನ್ನು ಪಡೆಯಲು ಸೇರಿದ್ದೀರಿ, ನಿಮಗೆಲ್ಲಾ ನನ್ನ ನಮಸ್ಕಾರಗಳು.
ಈ ದೇಶದ ಆಳ್ವಿಕೆಯು ನಿಮ್ಮೊಂದಿಗೆ ಯಾವ ರೀತಿಯಲ್ಲಿ ವರ್ತಿಸುತ್ತಿದೆಯೊ, ಅದು ನನಗೆ ದಬ್ಬಾಳಿಕೆಯ ತಂದೆ-ತಾಯಿಗಳ ಕತೆಯನ್ನು ನೆನಪಿಸುತ್ತದೆ.
ಅವರ ಮಕ್ಕಳು ಶಿಲ್ಪಿಯೋ, ಪ್ರವಾಸಿಯೋ ಆಗಬೇಕೆಂದು ಬಯಸಿದರೆ, ನಿಮಗೇನು ಬೇಕು ಎಂದು ನಿಮಗೆ ಗೊತ್ತಾಗೊಲ್ಲ. ನಿಮಗಿಂತ ಚೆನ್ನಾಗಿ ನಮಗೆ ಗೊತ್ತು. ನಿಮಗೆ ಯಾವುದು ಹೆಚ್ಚು ಲಾಭದಾಯಕ ಎಂಬುದು ನಮಗೆ ಗೊತ್ತು ಎನ್ನುತ್ತಾರೆ ಪೋಷಕರು.
ನಮ್ಮ ಪ್ರಕಾರ, ತನ್ನ ಬಲವನ್ನು ನಂಬಿ, ನೇಗಿಲು ಹಿಡಿದು ನೆಲವನ್ನು ಉಳುತ್ತಾನೋ, ಪ್ರೀತಿ ಮತ್ತು ಪರಿಶ್ರಮದಿಂದ ಅದೇ ನೆಲದಲ್ಲಿ ಬೀಜ ಬಿತ್ತುತ್ತಾನೊ, ಆ ನೆಲವನ್ನು ಸಿಂಗರಿಸುತ್ತಾನೊ, ಬೆಳೆಯನ್ನು ತನ್ನ ಮಗುವಂತೆ ಪೊರೆಯುತ್ತಾನೆ. ಆತನಿಗಿಂತ ಚೆನ್ನಾಗಿ ಬೇರೆ ಯಾರಿಗೂ ಯಾವುದೂ ಲಾಭದಾಯಕವಾದದ್ದು ಎಂಬುದು ತಿಳಿದಿರಲು ಸಾಧ್ಯವಿಲ್ಲ.
ಈ ಆಳ್ವಿಕೆ ಸಾವಿರಾರು ರೀತಿಯಲ್ಲಿ ಮುಗ್ದರೆಂದು, ವಂಚಕರೆಂದು ಹೆಸರು ಕೆಡಿಸುವ ಪ್ರಯತ್ನ ಮಾಡಿದರೆ, ನನ್ನಂತಹ ಲಕ್ಷಾಂತರ ಜನರಿದ್ದಾರೆ, ಅವರೆಲ್ಲರ ಪ್ರಾರ್ಥನೆ ನಿಮ್ಮೊಂದಿಗಿದೆ. ಈ ಎಲ್ಲರಿಗೂ ನಿಮ್ಮ ಶಕ್ತಿ, ಸಂಯಮ, ಅಧಿಕಾರವೇ ಮಾದರಿ.
ನಿಮ್ಮಂತಹವರಿಗಾಗಿಯೇ ಕವಿಯೊಬ್ಬರು ಹೇಳಿದ್ದು, ಈ ಘಮ್ಮೆನ್ನುವ ಹೂ ರಾಶಿ, ನಳನಳಿಸುವ ಹೊಲದ ದೊರೆ ನೀನು ಎಂದು ವರ್ಣಿಸಿದ್ದಾರೆ.
ನಮ್ಮ ಅನ್ನದಾತ ನೀವು, ನಿಮ್ಮ ಗುರಿಯನ್ನು ಮುಟ್ಟಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನಗೆ ನಂಬಿಕೆ ಇದೆ, ಈ ರೈತ ಹೋರಾಟ ವ್ಯಾಪಿಸುತ್ತದೆ ಮತ್ತು ಜನಸಾಮಾನ್ಯರು ಇದರಲ್ಲಿ ಭಾಗಿಯಾಗುತ್ತಾರೆ. ಆಗಲೇಬೇಕು. ಇಂತಹ ಕಾಲದಲ್ಲಿ ಮೌನವಾಗಿರುವುದು ಎಂದರೆ ದಬ್ಬಾಳಿಕೆ ನಡೆಸುತ್ತಿರುವವರ ಪರವಹಿಸಿದಂತೆ ಎಂದು ನಾನು ಭಾವಿಸುತ್ತೇನೆ. ನಮ್ಮ ಚಿತ್ರರಂಗದ ದೊಡ್ಡ ಮನುಷ್ಯ ಸುಮ್ಮನೆ ಕೂತಿದ್ದಾರೆ. ತುಟಿ ಬಿಚ್ಚಿದರೆ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರಿಗೆ ಅನ್ನಿಸುತ್ತಿದೆ. ಅಲ್ಲಾ, ಏಳು ತಲೆಮಾರು ಕೂತು ತಿನ್ನುವಷ್ಟು ಹಣ ಸಂಪಾದನೆ ಮಾಡಿದ್ದೀರಲ್ಲಾ, ಮಾತನಾಡುವುದಕ್ಕೆ ತೊಂದರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.