Header Ads
Header Ads
Breaking News

ವಸತಿ ಯೋಜನೆಯಡಿ ಮಂಜೂರಾದ ಮನೆಗಳು ನಿರ್ಮಾಣಗೊಳ್ಳುತ್ತಿಲ್ಲ:ವಿ.ಸುನಿಲ್ ಕುಮಾರ್

ವಸತಿ ಯೋಜನೆಯಡಿ ಮಂಜೂರಾದ ಮನೆಗಳು ನಿರ್ಮಾಣಗೊಳ್ಳುತ್ತಿಲ್ಲ. ಸರಕಾರದ ಸವಲತ್ತುಗಳನ್ನು ಫಲಾನುಭವಿಗಳು ಬಳಸಿಕೊಳ್ಳುವಂತೆ ಪಿಡಿಒಗಳು ಎಚ್ಚರಿಕೆ ನೀಡಬೇಕು ಎಂದು ವಿಧಾನ ಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಅವರು ತಾ. ಪಂ. ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೌಭಾಗ್ಯ ಯೋಜನೆ ಜಾರಿಯಾಗಿದ್ದು, ಅಂತಹ ಮನೆಗಳನ್ನು ಗುರುತಿಸಿ ಮೆಸ್ಕಾಂಗೆ ಮಾಹಿತಿ ನೀಡುವ ಜವಾಬ್ದಾರಿ ಗ್ರಾ.ಪಂ.ಪಿಡಿಒಗಳದ್ದಾಗಿದೆ. ಡಿ. 30ರೊಳಗೆ ಪ್ರತಿ ಪಿಡಿಒಗಳು ಪಟ್ಟಿ ತಯಾರಿಸುವಂತೆ ಶಾಸಕರು ಸೂಚಿಸಿದರು.
ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಮಾತನಾಡಿ, ಮುನಿಯಾಲು ಆರೋಗ್ಯಕೇಂದ್ರಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶವಾಗಿಲ್ಲ ಎಂದರು. ಜತೆಗೆ ತಾಲೂಕಿನಲ್ಲಿರುವ ವೈದ್ಯರ ಮತ್ತು ಆರೋಗ್ಯ ಸಹಾಯಕಿ ಹುದ್ದೆಗಳು ಖಾಲಿ ಇರುವ ಬಗ್ಗೆ ಶಾಸಕರ ಗಮನ ಸೆಳೆದರು.

ಕೆಡಿಪಿ ಸದಸ್ಯ ಅನಿಲ್ ಪೂಜಾರಿ ಮಾತನಾಡಿ, ಕಡಾರಿ ಹೊಳೆಯ ಕಿಂಡಿ ಅಣೆಕಟ್ಟುಗೆ ಹಲಗೆ ಹಾಕುವಂತೆ, ಮಾಳ ಪೇರಡ್ಕದ ಬಳಿ ನಿರ್ಮಾಣಗೊಂಡ ಎಸ್‌ಸಿ ಸಮುದಾಯ ಭವನವನ್ನು ಪೂರ್ಣಗೊಳಿಸಿ ಉದ್ಘಾಟಿಸುವಂತೆ, ಅರ್ಧದಲ್ಲಿ ನಿಂತ ಮಲೆಕುಡಿಯ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರ ಗಮನ ಸೆಳೆದರೆ, ಇನ್ನೊಬ್ಬ ಸದಸ್ಯ ಅಣ್ಣಪ್ಪ ನಕ್ರೆ ಮಾತನಾಡಿ, ಜಾಗ ಹಾಗೂ ಅನುದಾನ ಮಂಜೂರುಗೊಂಡ ತಾಲೂಕು ಅಂಬೇಡ್ಕರ್ ಭವನಕ್ಕೆ ಇನ್ನೂ ಶಿಲಾನ್ಯಾಸಗೊಂಡಿಲ್ಲ ಎಂದು ದೂರಿದರು. ಈ ಬಗ್ಗೆ ಗಮನ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಭತ್ತದ ಕೃಷಿ ಹೆಚ್ಚಿಸುವಲ್ಲಿ ಪ್ರಯತ್ನಿಸುವಂತೆ ಕೃಷಿ ಇಲಾಖೆಗೆ ಸೂಚನೆ, ತಾಲೂಕು ಆಸ್ಪತ್ರೆಯ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಅದಕ್ಕೆ ಪೂರಕವಾದ ಸಲಕರಣೆಗಳ ಒದಗಿಸುವ ಬಗ್ಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚ, ಕಿಂಡಿ ಅಣೆಕಟ್ಟುಗಳಿಗೆ ಶೀಘ್ರದಲ್ಲಿ ಹಲಗೆ ಅಳವಡಿಸಿಕೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚನೆ, ವಿದ್ಯಾರ್ಥಿ ವಸತಿಗೃಹಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸುವಂತೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಉಪಾಧ್ಯಕ್ಷ ಗೋಪಾಲ ಮೂಲ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮಾಪಾಲು ಜಯವರ್ಮ ಜೈನ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮೇಜರ್ ಹರ್ಷ ಕೆ.ಬಿ, ತಹಸೀಲ್ದಾರ್ ಮೊಹಮ್ಮದ್ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply