Header Ads
Breaking News

ವಸತಿ ಸಮುಚ್ಚಯದ ತ್ಯಾಜ್ಯ ನೀರು ಸಾರ್ವಜನಿಕ ಸ್ಥಳಕ್ಕೆ : ಮಂಜೆಶ್ವರದ ಮಲ್ಲುಕುದಿ ಮಖಾಂ ರಸ್ತೆಯ ಬಳಿ ಸಮಸ್ಯೆ

ಮಂಜೆಶ್ವರ: ಮಂಜೆಶ್ವರ ಕುನ್ನಿಲ್ ಜುಮಾ ಮಸೀದಿ ಪರಿಸರದ ಮಂಜೆಶ್ವರ ಗ್ರಾ.ಪಂ.ನ ಎಂಟನೇ ವಾರ್ಡ್ ವ್ಯಾಪ್ತಿಯಲ್ಲಿರುವ ಮಲ್ಲುಕುದಿ ಮಖಾಂ ರಸ್ತೆಯಲ್ಲಿ ತಲೆ ಎತ್ತಿರುವ ಖಾಸಗಿ ವ್ಯಕ್ತಿಯೊಬ್ಬರ ಫ್ಲಾಟೊಂದರಿಂದ ಶೌಚಾಲಯದ ಮಲಿನ ನೀರನ್ನು ಸಾರ್ವಜನಿಕ ಸ್ಥಳಗಳಿಗೆ ಹರಿಯಬಿಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಕಳೆದ ಒಂದು ವಾರಗಳಿಂದ ಮಲಿನ ಜಲ ನಿರಂತರವಾಗಿ ಸಾರ್ವಜನಿಕ ಸ್ಥಳಕ್ಕೆ ಹರಿದು ಬರುತಿದ್ದು, ಈ ಬಗ್ಗೆ ಕಟ್ಟಡ ಮಾಲಿಕರಲ್ಲಿ ಪರಿಸರವಾಸಿಗಳು ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುವಂತೆ ವಿನಂತಿಸಿಕೊಂಡರೂ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿರುವುದಾಗಿ ಊರವರು ಹೇಳುತಿದ್ದಾರೆ. ಇದೀಗ ಪರಿಸರವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಆರೋಗ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆ ಇಂತಹ ವಿಷಯದಲ್ಲಿ ಯಾಕಾಗಿ ಮೌನ ವಹಿಸಿದೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಈ ಪರಿಸರದಲ್ಲಿ ನೂರಕ್ಕಿಂತಲೂ ಮಿಕ್ಕ ಕುಟುಂಬಗಳು ವಾಸಿಸುತಿದ್ದು, ಎಲ್ಲರೂ ಇದೇ ದಾರಿಯಾಗಿ ನಡೆದುಕೊಂಡು ಹೋಗಬೇಕಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಊರವರು ಎಚ್ಚರಿಕೆಯನ್ನೂ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *