

ಕಳೆದ ಒಂದು ವಾರದ ಹಿಂದೆ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಿಂದ ನಾಪತ್ತೆಯಾಗಿದ್ದ ವಿಠಲ ಬಂಗೇರಾ ಅವರ ಮೃತ ದೇಹವು ಮೂಡುಬಿದಿರೆ ತಾಲೂಕಿನ ಪಡುಕೋಣಾಜೆ ಗ್ರಾಮದ ಹೌದಾಲ್ನ ಕೊಣಾಜೆ ಕಲ್ಲಿನ ಬಳಿ ಪತ್ತೆಯಾಗಿದೆ.
61ರ ಹರೆಯದ ವಿಠಲ ಬಂಗೇರಾ ಅವರು ಕುರಿಯಾಳದ ದುರ್ಗಾ ನಗರದಲ್ಲಿರುವ ತನ್ನ ಮನೆಯಿಂದ ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳದಿಂದ ಮೂಡುಬಿದಿರೆ ಕಡೆಗೆ ಬಂದಿದ್ದಾರೆಂಬ ಮಾಹಿತಿಯೂ ಮನೆಯವರಿಗೆ ತಿಳಿದಿತ್ತು ಆದರೆ ಅವರು ಎಲ್ಲಿಗೆ ಹೋಗುತ್ತೇನೆಂದು ಹೇಳದೆ ಮನೆಯಿಂದ ಹೋರಟಿದ್ದರಿಂದ ಮತ್ತು ಮತ್ತೆ ಮನೆಯವರ ಸಂಪರ್ಕಕ್ಕೆ ಸಿಗದಿದ್ದರಿಂದ ಠಾಣೆಯಲ್ಲಿ ನಾಪತ್ತೆಯ ದೂರು ನೀಡಿದ್ದರು. ಇದೀಗ ಕೊಣಾಜೆಕಲ್ಲಿನ ಗುಡ್ಡದ ಬಳಿ ಇರುವ ಕಲ್ಲಿನ ಮೇಲೆ ಮಲಗಿದ ಸ್ಥಿತಿಯಲ್ಲಿ ಕೊಳೆತ ಮೃತ ದೇಹವು ಪತ್ತೆಯಾಗಿದೆ. ಕೊಣಾಜೆ ಕಲ್ಲಿಗೆ ಹೋಗುವ ಒಳರಸ್ತೆಯಲ್ಲಿ ಹೋದವರು ಯಾವುದೋ ಅಸೌಖ್ಯದಿಂದಲೋ ಅಥವಾ ಖಾಯಿಲೆಯ ಬಾಧೆಯಿಂದಲೋ ಬಳಲಿ ಕೊಣಾಜೆಕಲ್ಲಿನ ಗುಡ್ಡದ ಮೇಲೆ ಮಲಗಿದವರು ಮಲಗಿದಲ್ಲಿಯೇ ಮೃತಪಟ್ಟಿರಬಹುದೆಂದು ಮೂಡುಬಿದಿರೆ ಪೊಲೀಸರು ತಿಳಿಸಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.