Header Ads
Breaking News

ವಾರಸುದಾರರು ಇಲ್ಲದ ಮೂರು ಶವಗಳ ಅಂತ್ಯಸಂಸ್ಕಾರ

ಉಡುಪಿ: ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ವಾರಸುದಾರರು ಇಲ್ಲದ ಶವಗಳ ಅಂತ್ಯಸಂಸ್ಕಾರನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಇವರು ಸೇರಿಕೊಂಡು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ,ಪೊಲೀಸ್ ರ ಸಮಕ್ಷಮ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಮೇ-21, ಗುರುವಾರ ನಡೆಸಿದರು.
ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಳೆದ ಮಾರ್ಚ್ 4 ರಂದು, ಅನಾರೋಗ್ಯದ ಕಾರಣದಿಂದ ದಾಖಲಾಗಿದ್ದ ನಾಗರಾಜ (35 ವ) ರೋಗಿಯು ಚಿಕಿತ್ಸೆಗೆ ಸ್ಪಂದಿಸದೆ, ಮಾ.23, ರಂದು ಮೃತಪಟ್ಟರು. ಮೃತನ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರ ಬರುವಿಕೆಗಾಗಿ ರಕ್ಷಿಸಿಡಲಾಗಿತ್ತು. ಯುವಕ ಮೃತಪಟ್ಟು 60 ದಿನಗಳು ಕಳೆದರೂ ಸಂಬಂಧಿಕರು ಸಂಪರ್ಕಿಸಿರಲಿಲ್ಲ.

ಇನ್ನೊಂದು ಪ್ರಕರಣದಲ್ಲಿ ಮೂಲ್ಕಿ ಪರಿಸರದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ, ಅಪರಿಚಿತ ವೃದ್ಧರನ್ನು ಕಳೆದ ಏ.7 ರಂದು, ಅಂಬುಲೇನ್ಸ್ 108 ವಾಹನದವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ವೃದ್ಧರು ಏ.22 ರಂದು ಮೃತಪಟ್ಟರು. ಮರಣ ಪೂರ್ವದಲ್ಲಿ ವೃದ್ಧರು ದೇವದಾಸ (70ವ) ಎಂದಷ್ಟೆ ಹೇಳಿಕೊಂಡಿದ್ದರು. ಮೃತರ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಲ್ಲಿ ರಕ್ಷಿಸಿಡಲಾಗಿತ್ತು. ವ್ಯಕ್ತಿ ಮೃತಪಟ್ಟು 30 ದಿನಗಳು ಕಳೆದರೂ ಸಂಬಂಧಿಕರು ಸಂಪರ್ಕಿಸಿರಲಿಲ್ಲ.

ಮೇ 7 ರಂದು ನಗರದ ಸಿಟಿ ಬಸ್ಸು ನಿಲ್ದಾಣದ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಮೃತ ವ್ಯಕ್ತಿಯನ್ನು ಮೃತ್ಯುಂಜಯ (45ವ) ತಂದೆ ಗಂಗಾಧರ ಸ್ವಾಮಿ ಹಳೆಹುಬ್ಬಳ್ಳಿ ನಿವಾಸಿಯೆಂದು ಗುರುತಿಸಲಾಗಿತ್ತು.15 ದಿನಗಳಿಂದ ಶವವು ರಕ್ಷಿಸಿಡಲಾಗಿತ್ತು.

ಮೂರು ಅಪರಿಚಿತ ಶವಗಳ ವಾರಸುದಾರರ ಪತ್ತೆಗೊಳಿಸಲು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಕಟಣೆ ನೀಡಲಾಗಿತ್ತು. ಆದರೆ ಕಾಯುವಿಕೆ ಕಾಲಮಿತಿ ಕಳೆದರೂ, ಯಾರೂ ಬಾರದ ಕಾರಣದಿಂದ, ಮೂರು ಕಳೇಬರಗಳ ಅಂತ್ಯಸಂಸ್ಕಾರವನ್ನು ಉಡುಪಿ ನಗರ ಠಾಣೆಯು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರ ಸಹಕಾರದಿಂದ ನಡೆಸಿದರು. ಅಂತಿಮ ನಮನ, ಕಳೇಬರಗಳಿಗೆ ಹೂಹಾರ ಸಮರ್ಪಿಸಿ, ಕಾನೂನಿನಂತೆ ದಫನ ರೂಪದಲ್ಲಿ ಅಂತ್ಯಸಂಸ್ಕಾರವನ್ನು, ನಗರ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮದಲ್ಲಿ ಗೌರವಯುತವಾಗಿ, ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ನಡೆಸಲಾಯಿತು. ಅಣ್ಣಪ್ಪ ಕರಂಬಳ್ಳಿ ಅವರು ಆರ್ಥಿಕ ನೆರವು ನೀಡಿದರು. ಶವಗಳ ಸಾಗಿಸಲು, ಜಿಲ್ಲಾಸ್ಪತ್ರೆ ಹಾಗೂ ಪಂಚರತ್ನ ಸೇವಾ ಟ್ರಸ್ಟ್, ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು. ಜಗದೀಶ್ ಪೂಜಾರಿ ಸಹಕರಿಸಿದರು.

Related posts

Leave a Reply

Your email address will not be published. Required fields are marked *