
ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆಯ ಬಳಿಕ ಎರಡು ಅವಧಿಗೆ ಮೀಸಲಾತಿ ಘೋಷಣೆಯಾಗಿ ಅಧ್ಯಕ್ಷರ ಉಪಾಧ್ಯಕ್ಷರ ಸ್ಥಾನ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈಗ ಸಂಬಂಧವೇ ಇಲ್ಲದ ಮೀಸಲಾತಿ ಆದೇಶವನ್ನು ವಿಟ್ಲದಲ್ಲಿ ಜಾರಿ ಮಾಡಲು ಹೊರಟ ಕ್ರಮ ಸರಿಯಲ್ಲ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಹೇಳಿದರು.ಅವರು ವಿಟ್ಲ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹೊಸದಾಗಿ ಘೋಷಣೆಯಾಗಿದ್ದ ವಿಟ್ಲ ಪಟ್ಟಣ ಪಂಚಾಯಿತಿಗೆ 2016ರ ಪೆಬ್ರವರಿಯಲ್ಲಿ ಮೊದಲ ಅವಧಿಯ ಮೀಸಲಾತಿ ಘೋಷಣೆಯಾಗಿದ್ದು, ಹಿಂದುಳಿದ ವರ್ಗ ಎ (ಬಿಸಿಎ) ಅಧ್ಯಕ್ಷ ಹಾಗೂ ಪರಿಶಿಷ್ಠ ವರ್ಗದ ಮಹಿಳೆ (ಎಸ್ ಟಿ ಡಬ್ಲ್ಯು) ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ಚುನಾವಣೆಯ ಸಂದರ್ಭದಲ್ಲಿ ಪರಿಶಿಷ್ಠ ವರ್ಗದ ಮಹಿಳೆಯ ಸ್ಥಾನ ಇಲ್ಲದ ಕಾರಣ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು, ಪರಿಶಿಷ್ಠ ವರ್ಗದ ಪುರುಷರಿಗೆ (ಎಸ್ ಟಿ) ಸ್ಥಾನವನ್ನು ನೀಡಬಹುದೆಂದು 2018ರ ಮಾರ್ಚ್ ನಲ್ಲಿ ಆದೇಶ ಹೊರಡಿಸಿತು. 2018ರ ಸೆಪ್ಟೆಂಬರ್ ನಲ್ಲಿ ಎರಡನೇ ಅವಧಿಯ ಮೀಸಲಾತಿ ಘೋಷಣೆ ಮಾಡಿದ್ದು, ಪರಿಶಿಷ್ಟ ಜಾತಿ (ಎಸ್ ಸಿ) ಅಧ್ಯಕ್ಷ ಹಾಗೂ ಹಿಂದುಳಿದ ವರ್ಗ ಬಿ (ಬಿಸಿಬಿ) ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಯಿತು. ಆದರೆ ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮಾತ್ರ ಇದ್ದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನ ಅವರಿಗೆ ಲಭಿಸಿತು. ಆದರೆ ಎರಡನೇ ಅವಧಿಯಲ್ಲಿ ಉಪಾಧ್ಯಕ್ಷರನ್ನು ಬದಲಾವಣೆ ಮಾಡದೆ ಮೊದಲ ಅವಧಿಯ ಮೀಸಲಾತಿಯನ್ನೇ ಮುಂದುವರಿಸಲಾಗಿತ್ತು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ಇಂಟೆಕ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ ಉಪಸ್ಥಿತರಿದ್ದರು.