Header Ads
Header Ads
Breaking News

ವಿಟ್ಲ ಭಾಗದಲ್ಲಿ ಮಳೆಗಾಲಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳದ ಇಲಾಖೆ : ವಾರಗಟ್ಟಲೆ ಕತ್ತಲಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ

ವಿಟ್ಲ: ಮಳೆಗಾಲದಲ್ಲಿ ಹಾನಿ ಸಂಭವಿಸುವುದು ಸಾಮಾನ್ಯ. ಹಾನಿಗಳನ್ನು ತಡೆಯುವ ಉದ್ದೇಶದಿಂದ ಇಲಾಖೆಗಳು ಹಾಗೂ ಆಡಳಿತ ವರ್ಗಗಳು ಪೂರ್ವಸಿದ್ಧತೆಗಳು ನಡೆಸುತ್ತದೆ. ಆದರೆ ಇಲಾಖೆಗಳು ಮೌನವಾಗಿ ಕುಳಿತರೆ ಹಾನಿ ಸಂಭವಿಸುವ ಸಂಖ್ಯೆ ಹೆಚ್ಚಾಗಲಿದೆ. ಇಲ್ಲಿ ನಡೆದದ್ದು, ಕೂಡ ಅದೇ.ಈ ಬಾರೀ ಮಳೆರಾಯ ತಡವಾಗಿ ಪ್ರವೇಶಿಸಿದ್ದಾನೆ. ಆದರೆ ವಿಟ್ಲ ಹೋಬಳಿ ಭಾಗದಲ್ಲಿ ಇಲಾಖೆಗಳು ಪೂರ್ವಸಿದ್ಧತೆಗಳು ನಡೆಸುವಲ್ಲಿ ವಿಫಲವಾಗಿದೆ. ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಕರೈ ಭಾಗದಲ್ಲಿ ಭಾರೀ ಮಳೆಗಾಳಿಗೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ೮ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಗ್ರಾಮಸ್ಥರು ವಾರಗಟ್ಟಲೇ ಕತ್ತಲಿನಲ್ಲಿ ಜೀವನ ನಡೆಸುವಂತಾಗಿದೆ. ಕೊಳ್ನಾಡು ಗ್ರಾಮದ ಕರೈ ಜಂಕ್ಷನ್ ನ ಸುತ್ತಮುತ್ತಲಿನಲ್ಲಿ ಮಳೆಗಾಳಿಗೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಎಚ್.ಟಿ ತಂತಿಯ ಮೇಲೆ ಮುರಿದು ಬಿದ್ದಿದೆ. ಇದರಿಂದ ಒಂದೇ ಬಾರಿಗೆ8 ವಿದ್ಯುತ್ ಕಂಬಗಳು ಉರುಳಿದ್ದು, ಇನ್ನೂ ಕೆಲವು ಕಂಬಗಳು ರಸ್ತೆಗೆ ವಾಲಿ ನಿಂತಿದೆ. ಇದರಿಂದ ವಿಟ್ಲ ಸಾಲೆತ್ತೂರು ರಸ್ತೆ ಸಂಚಾರ ಅರ್ಧ ತಾಸುಗಳ ವರೆಗೆ ಸ್ಥಗಿತಗೊಂಡಿತ್ತು. ವಾಹನಗಳನ್ನು ಬೇರೆ ರಸ್ತೆ ಮೂಲಕ ಕಳುಹಿಸಲಾಗಿತ್ತು. ಬಳಿಕ ಕೊಳ್ನಾಡು ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಕರೈ ಫ್ರೆಂಡ್ಸ್ ತಂಡದ ಕಾರ್ಯಕರ್ತರು ಜತೆಯಾಗಿ ಕಾರ್ಯಾಚರಣೆ ನಡೆಸಿದರು.

ಸುರತ್ಕಲ್-ಸಾಲೆತ್ತೂರು-ಕಬಕ ರಾಜ್ಯ ಹೆದ್ದಾರಿಯ ಕಾಮಗಾರಿ ಕಳೆದ ಮೂರು ವರ್ಷದಿಂದ ನಡೆಯುತ್ತಿದೆ. ಈ ಸಂದರ್ಭ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲು ಕೊಳ್ನಾಡು ಗ್ರಾಮ ಪಂಚಾಯಿತಿ ನಿರ್ಣಯ ಕೈಗೊಂಡು ಪತ್ರ ಬರೆದಿದ್ದರು. ಆದರೆ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಹಾಗೂ ಕಾಮಗಾರಿ ಕೂಡ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದಾಗ ಈಗಾಗಲೇ ಮೆಸ್ಕಾಂ ಇಲಾಖೆಗೆ 64 ಲಕ್ಷ ರೂ. ಹಣ ಪಾವತಿಸಲಾಗಿದೆ ಎಂದು ತಿಳಿಸಿದ್ದು, ಮೆಸ್ಕಾಂ ಇಲಾಖೆ ನಮಗೆ ಹಣ ಪಾವತಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಎರಡು ಇಲಾಖೆಗಳ ಹೊಂದಾಣಿಕೆ ಸಮಸ್ಯೆಯಿಂದ ಕಂಬಗಳ ಸ್ಥಳಾಂತರವಾಗಿಲ್ಲ. ಇದರಿಂದ ಈ ಭಾಗದಲ್ಲಿ ಮಳೆಗೆ ಭಾರೀ ಹಾನಿಯಾಗುತ್ತಿದೆ ಎಂದು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ತಿಳಿಸಿದ್ದಾರೆ.

ಮರ ಹಾಗೂ ವಿದ್ಯುತ್ ಕಂಬಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಈ ಬಗ್ಗೆ ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದು, ಕಂಬಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಈ ಭಾಗದ ಜನರು ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಕಾರಿನ ಮೇಲೆ ವಿದ್ಯುತ್ ಕಂಬ ಬೀಳುವ ಹಂತದಲ್ಲಿದ್ದು, ಯಾವುದೇ ಹಾನಿಯಾಗಿಲ್ಲ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸದಸ್ಯ ಪವಿತ್ರ ಪೂಂಜ, ಮೆಸ್ಕಾಂ ಶಾಖಾಧಿಕಾರಿ ಪ್ರಸನ್ನ, ಮೊದಲಾದವರು ಭೇಟಿ ನೀಡಿ ತುರ್ತು ಕಾಮಗಾರಿಗೆ ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ಇಲಾಖೆಗಳು ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *