
ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಾರು, ಪಟ್ಲ ಭಾಗದ ಜನರಿಗೆ ನೀರಿಗಾಗಿ ಪರದಾಟ ನಡೆಸುತ್ತಿದ್ದು, ದುಬಾರಿ ಹಣ ಕೊಟ್ಟು ಕುಡಿಯಲು ನೀರು ಖರೀದಿಸುವ ದುಸ್ಥಿತಿ ಬಂದಿದೆ. ನೀರು ಸರಬರಾಜು ಮಾಡಲು ನೀರಿನ ಟ್ಯಾಂಕ್ ಹಾಗೂ ಪೈಪ್ಲೈನ್ ಇದ್ದರೂ ಇದರ ಮೂಲಕ ಕಳೆದ ಮೂರು ವರ್ಷದಿಂದ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ವಿಟ್ಲ ಮುಡ್ನೂರು ಗ್ರಾಮದ ಮಾಡತ್ತಾರು, ಪಟ್ಲ ಭಾಗದಲ್ಲಿ ಸುಮಾರು 15ಕ್ಕಿಂತಲೂ ಅಧಿಕ ಮನೆಗಳಿದ್ದು, ಇಲ್ಲಿ ಯಾವುದೇ ಬಾವಿಗಳಿಲ್ಲ. ಈ ಭಾಗದ ಜನರು ಗ್ರಾಮ ಪಂಚಾಯತ್ ನಿಂದ ಬರುವ ನೀರನ್ನು ಆಶ್ರಯಿಸಿದ್ದಾರೆ. ಮಾಡತ್ತಾರು, ಪಟ್ಲ ಭಾಗಕ್ಕೆ ನೀರು ಸರಬರಾಜು ಮಾಡಲು ನೀರಿನ ಟ್ಯಾಂಕ್, ಹಾಗೂ ಪೈಪ್ ಲೈನ್ ಇದ್ದರೂ ಇದರ ಮೂಲಕ ಕಳೆದ ಮೂರು ವರ್ಷದಿಂದ ನೀರು ಸರಬರಾಜು ಆಗುತ್ತಿಲ್ಲ. ಇದರಿಂದ ಈ ಭಾಗದ ಜನರು ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯ ನೀರು ತಂದು ಇದರಿಂದ ಜೀವನ ನಡೆಸುತ್ತಿದ್ದಾರೆ. ಅಳವಡಿಸಲಾದ ಪೈಪ್ ಲೈನ್ ಒಡೆದು ನೀರು ಭೂಮಿ ಪಾಲಾಗುತ್ತಿದೆ.
ಜನರು ನಿರಂತರ ಬೇಡಿಕೆ ಹಿನ್ನೆಲೆಯಲ್ಲಿ ಕಳೆದ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಜನರ ಕಣ್ಣಿಗೆ ಮಣ್ಣೆರಚಲು ಹೊಸ ಪೈಪು ಲೈನ್ ಅಳವಡಿಸುವ ಭರವಸೆ ನೀಡಿದ್ದು, ಈ ಭಾಗದಲ್ಲಿ ಪೈಪುಗಳನ್ನು ತಂದು ರಾಶಿ ಹಾಕಿದ್ದಾರೆ. ಇದನ್ನು ನಂಬಿದ ಈ ಭಾಗದ ಗ್ರಾಮಸ್ಥರು ತಮ್ಮ ಬೆಂಬಲಿತರಿಗೆ ಮತ ಹಾಕಿದ್ದಾರೆ. ಚುನಾವಣೆ ನಡೆದ ಬಳಿಕ ಈ ಭಾಗಕ್ಕೆ ಕಾಲಿಡಲಿಲ್ಲ. ತಂದಿರಿಸಲಾದ ಪೈಪುಗಳು ಬಿಸಿಲಿಗೆ ಒಣಗುತ್ತಿದೆ. ಇದೀಗ ಗ್ರಾಮಸ್ಥರೇ ಕೈಯಿಂದ ಹಣ ಹಾಕಿ ಕಾಮಗಾರಿ ನಡೆಸಬೇಕು ಎಂದು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ಇದುವರೆಗೂ ದೂರುಗಳು ಬಂದಿಲ್ಲ ಎಂದು ಹೇಳುತ್ತಾರೆ. ಈ ಭಾಗದ ಗ್ರಾಮಸ್ಥರು ಕಳೆದ ಹಲವಾರು ಬಾರಿ ನೀರಿನ ಸಮಸ್ಯೆ ಬಗ್ಗೆ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ತಕ್ಷಣವೇ ಇಲ್ಲಿಗೆ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.