
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ರಮಾನಾಥ ವಿಟ್ಲ ಸಾರಥ್ಯದಲ್ಲಿ ವಿಆರ್ಸಿ ವತಿಯಿಂದ ವಿಟ್ಲೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೇವರು ಕಷ್ಟ ಕೊಡುವುದಿಲ್ಲ. ಸತ್ಕರ್ಮದಿಂದ ಸತ್ಫಲ, ದುಷ್ಕರ್ಮದಿಂದ ಕೆಟ್ಟ ಫಲ. ಕೊರೊನಾ ರೋಗವು ದೇವರು ನೀಡಿದ ಕಷ್ಟವಲ್ಲ. ದುಷ್ಕರ್ಮಗಳೇ ಕಾರಣವಾಗಿದೆ ಎಂದು ಸ್ವಾಮೀಜಿ ಹೇಳಿದರು.
ಆಚಾರ ವಿಚಾರ ಶುದ್ಧವಾಗಿರಬೇಕು. ದೇಗುಲಗಳ ಪ್ರಭಾವಲಯದಲ್ಲಿ ಕೆಟ್ಟ ಮಾತನಾಡಬಾರದು. ಜಗಳಾಡಬಾರದು. ರಾಜಕೀಯ ಮಾತನಾಡಬಾರದು. ಇನ್ನೊಬ್ಬರಿಗೆ ಅನ್ಯಾಯ ಬಯಸಬಾರದು. ಇನ್ನೊಬ್ಬರ ಒಳಿತಿಗಾಗಿ ಪ್ರಾರ್ಥಿಸಬೇಕು. ಎಲ್ಲರೂ ಸದ್ಗುಣಶೀಲರಾಗಿರಬೇಕು. ಒಗ್ಗಟ್ಟಾಗಿರಬೇಕು. ಈ ಕಾಲಘಟ್ಟದಲ್ಲಿ ಪ್ರತಿನಿತ್ಯ ದೇವರ ದರ್ಶನ ಮಾಡಿ, ಪುನೀತರಾಗಬೇಕು ಎಂದು ಹೇಳಿದರು.
ಕೊರೊನಾ ವಾರಿಯರ್ ವಿಟ್ಲ ಪುಷ್ಪಾ ಕ್ಲಿನಿಕ್ ವೈದ್ಯ ಡಾ.ವಿ.ಕೆ.ಹೆಗ್ಡೆ ದಂಪತಿಗೆ ಪೌರ ಸನ್ಮಾನ ನಡೆಯಿತು. ಸಾಮಾಜಿಕ ಕಾರ್ಯಕರ್ತ ಆಶೋಕ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ನಮಸ್ಕಾರ ಮಾಸ್ಟ್ರೆ ನಾಟಕ ಪ್ರದರ್ಶನಗೊಂಡಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಬಂಗಾರು ಅರಸರು, ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ , ವಿ.ಆರ್.ಸಿ.ಅಧ್ಯಕ್ಷ ರಮಾನಾಥ ವಿಟ್ಲ, . ನ್ಯಾಯವಾದಿ ನಟೇಶ್ ವಿಟ್ಲ, ಅಶೋಕ್ ವಿಟ್ಲ ಮತ್ತು ತುಳಸೀದಾಸ ಶೆಣೈ ಉಪಸ್ಥಿತರಿದ್ದರು.