Header Ads
Header Ads
Header Ads
Breaking News

ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ : ಬಿ.ಸಿ ರೋಡ್‌ನಲ್ಲಿ ಅರ್ಥಪೂರ್ಣವಾಗಿ ನಡೆದ ಕಾರ್ಯಕ್ರಮ

ಬಂಟ್ವಾಳ: ತಾಂಡವ ನೃತ್ಯವಾಡಿದ ಶಿವ, ತಾಸೆಯ ಹಿಮ್ಮೇಳಕ್ಕೆ ಹೆಜ್ಜೆ ಹಾಕಿದ ಹುಲಿ, ರ್‍ಯಾಂಪ್ ವಾಕ್ ಮಾಡಿದ ಮಿಸ್ ಇಂಡಿಯಾ, ಬಾಲ ಕಾರ್ಮಿಕ ಪದ್ದತಿಯನ್ನು ನಿಷೇಧಿಸುವಂತೆ ಒತ್ತಾಯಿಸಿದ ಪುಟಾಣಿ, ಗತ ವೈಭವ ಮೆರೆದ ಟಿಪ್ಪು ಸುಲ್ತಾನ್… ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಿಶ್ವ ವಿಶೇಷ ಚೇತನರ ದಿನದ ಅಂಗವಾಗಿ ವಿಶೇಷ ಚೇತನ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಸಾಂಸ್ಕೃತಿಕ ವೈಭವದ ತುಣುಕುಗಳಿವು. 

ನಮಗೆ ಅನುಕಂಪ ಬೇಡ, ಅವಕಾಶ ಕೊಡಿ ಎನ್ನುವಂತೆ ವಿಶೇಷ ಚೇತನ ಮಕ್ಕಳಿಗೆ ನೀಡಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ದೇಶ ಕಾಯುವ ಯೋಧ, ಸನ್ಯಾಸಿ, ಶ್ರೀ ಕೃಷ್ಣ ಮೊದಲಾದ ವೇಷಗಳನ್ನು ತೊಟ್ಟು ಮನರಂಜಿಸಿದರು, ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಕ್ಕಳ ಪೋಷಕರು ಬಲೂನಿನ ಆಟ, ಮಡಕೆ ಒಡೆಯುವ ಆಟಗಳಲ್ಲಿ ಪಾಲ್ಗೊಂಡು ಖುಷಿ ಪಟ್ಟರು. ಈ ಮೂಲಕ ಬಿ.ಸಿ.ರೋಡಿನಲ್ಲಿ ವಿಶ್ವವಿಶೇಷ ಚೇತನ ಮಕ್ಕಳ ದಿನಾಚರಣೆ ಅರ್ಥ ಪೂರ್ಣವಾಗಿ ನಡೆಯಿತು.

ಲಯನ್ಸ್ ಕ್ಲಬ್ ಬಂಟ್ವಾಳ, ಲಯನ್ಸ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ನಿರ್ಮಲ ಹೃದಯ ಲಯನ್ಸ್ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರ ಮತ್ತು ಲಯನ್ಸ್ ಫಿಸಿಯೋಥೆರಪಿ ಕೇಂದ್ರದ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಇದರ ಸಹಭಾಗಿತ್ವದಲ್ಲಿ ನಡೆದ ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಉದ್ಘಾಟಿಸಿದರು. ಲಯನ್ಸ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ. ವಸಂತ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ದ್ವಿತೀಯ ರಾಜ್ಯಪಾಲ ವಸಂತ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *