Header Ads
Header Ads
Breaking News

ಸರಕಾರಿ ಶಾಲೆಗಳಿಗೆ ಮಾದರಿಯಾದ ದೇರಳಕಟ್ಟೆಯ ಎಸ್‌ಡಿಎಂಸಿ..! : ಅಭಿವೃದ್ಧಿಯತ್ತ ಸಾಗುತ್ತಿದೆ ದೇರಳಕಟ್ಟೆ ಸರ್ಕಾರಿ ಶಾಲೆ

ದೇರಳಕಟ್ಟೆ : ಸರಕಾರಿ ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಮನಸ್ಸು ಮಾಡಿದರೆ, ಪ್ರಯತ್ನಪಟ್ಟರೆ ಏನೇನು ಮಾಡಬಹುದು ಎಂಬುದಕ್ಕೆ ದೇರಳಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್ಡಿಎಂಸಿ) ಸಾಕ್ಷಿ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..
ಕಳೆದ ವರ್ಷ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡಿದಾಗ ದೇರಳಕಟ್ಟೆ ಸರಕಾರಿ ಶಾಲೆಯ ಎಸ್ಡಿಎಂಸಿ ತಕ್ಷಣ ತಕ್ಷಣ ಕಾರ್ಯಪ್ರವೃತ್ತವಾಯಿತು. ಆಗಿನ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್, ಡಿಡಿಪಿಐ, ಬಿಇಒ ಅವರೊಂದಿಗೆ ಚರ್ಚಿಸಿ ಈ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿ ಆರಂಭಿಸಲು ಪ್ರಯತ್ನಿಸಿದರು.
ಇಷ್ಟೇ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇಲ್ಲ. ದೇರಳಕಟ್ಟೆಯಂತಹ ಬೆಳೆಯುತ್ತಿರುವ ನಗರದಲ್ಲಿರುವ ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ಎಂಬಂತೆ ಈ ಸರಕಾರಿ ಶಾಲೆಯ ಆವರಣದಲ್ಲೇ ನರ್ಸರಿ, ಎಲ್ಕೆಜಿ, ಯುಕೆಜಿಯನ್ನೂ ಸ್ಥಾಪಿಸಲು ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು. ಅದರಂತೆ ಇಲ್ಲಿನ ನರ್ಸರಿಯಲ್ಲಿ 17, ಎಲ್ಕೆಜಿಯಲ್ಲಿ 50, ಯುಕೆಜಿಯಲ್ಲಿ 49 ಮಕ್ಕಳು ಕಲಿಯುತ್ತಿದ್ದಾರೆ. ಆಂಗ್ಲ ಮಾಧ್ಯಮದ ಒಂದನೇ ತರಗತಿಯ ಮಕ್ಕಳಿಗೆ ಸರಕಾರವೇ ಅತಿಥಿ ಶಿಕ್ಷಕಿಯರನ್ನು ನಿಯುಕ್ತಿಗೊಳಿಸಿದರೆ, ನರ್ಸರಿ-ಎಲ್ಕೆಜಿ-ಯುಕೆಜಿಗೆ ಸ್ವತಃ ಪೋಷಕರಿಂದ ಒಂದಷ್ಟು ಸಹಾಯಧನ ಪಡೆದು ನುರಿತ ಶಿಕ್ಷಕಿಯರನ್ನು ಹಾಗೂ ಇಬ್ಬರು ಆಯಾಗಳನ್ನು ನೇಮಿಸಿಕೊಂಡಿದ್ದಾರೆ. ಹಾಗಾಗಿ 2019-20ನೇ ಸಾಲಿನಿಂದ ಯಾವುದೇ ಸಮಸ್ಯೆಯಿಲ್ಲದೆ ಸರಕಾರಿ ಶಾಲೆಯಲ್ಲಿ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುತ್ತಿದ್ದಾರೆ. ಈ ಪ್ರಕ್ರಿಯೆಯಿಂದ ಮಕ್ಕಳ ಹೆತ್ತವರು ಕೂಡ ನಿರಾಳರಾಗಿದ್ದಾರೆ.
ಶಾಲೆಯ ಆವರಣದಲ್ಲಿ ಅಳಸಂಡೆ, ಬಸಳೆ, ಬೆಂಡೆಕಾಯಿ, ಪಪ್ಪಾಯಿಯಲ್ಲದೆ, ಬಾಳೆಗಿಡವೂ ಇದೆ. ಎಳವೆಯಲ್ಲೇ ವಿದ್ಯಾರ್ಥಿಗಳಲ್ಲಿ ಕೃಷಿಯತ್ತ ಆಸಕ್ತಿ ಮೂಡಿಸುವ ಶಿಕ್ಷಕಿಯರ ಪ್ರಯತ್ನಕ್ಕೆ ಪೋಷಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.
6,7,8 ನೇ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ ಪ್ರೊಜೆಕ್ಟರ್ ಕೂಡ ಇದೆ. ಇದನ್ನು ಶೀಘ್ರದಲ್ಲೇ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲು ಪ್ರಯತ್ನ ಮುಂದುವರಿದಿದೆ. ಒಂದನೇ ತರಗತಿಯ ಮಕ್ಕಳಿಗೆ ಸರಕಾರ ಒಂದು ಜೊತೆ ಸಮವಸವಲ್ಲದೆ ಎಸ್ಡಿಎಂಸಿಯವರೂ ದಾನಿಗಳ ಹಾಗೂ ಪೋಷಕರ ನೆರವು ಪಡೆದು ಎರಡು ಜೊತೆ ಸಮವಸ, ಬೆಲ್ಟ್, ನೋಟ್ಬುಕ್, ಐಡಿಕಾರ್ಡ್ ಇತ್ಯಾದಿ ನೀಡಿ ಮಕ್ಕಳಿಗೆ ಯಾವ ಕೊರತೆಯೂ ಕಾಡದಂತೆ ನೋಡಿಕೊಂಡಿದ್ದಾರೆ.
ಸರಕಾರಿ ಶಾಲೆ ಉಳಿಯಬೇಕು ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರಬೇಕು. ಈ ನಿಟ್ಟಿನಲ್ಲಿ ಎಸ್ಡಿಎಂಸಿ ಪ್ರಯತ್ನ ನಡೆಸಿದ್ದಕ್ಕೆ ಉತ್ತಮ ಪ್ರತಿಲ ಲಭಿಸಿದೆ.
ಒಂದೂವರೆ ವರ್ಷದ ಹಿಂದೆ ಈ ಶಾಲೆಯ ಜವಾಬ್ದಾರಿ ವಹಿಸಿಕೊಂಡ ನಮ್ಮ ತಂಡದಲ್ಲಿ ಮಕ್ಕಳ ಪೋಷಕರು, ಪದನಿಮಿತ್ತ ಸದಸ್ಯರು ಸೇರಿ 24 ಮಂದಿ ಇದ್ದೇವೆ. ನಾವೆಲ್ಲಾ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳ್ತಾರೆ -ಬಿ.ಎ.ಖಾದರ್.  
1ನೇ ತರಗತಿಯ ಆಂಗ್ಲ ಮಾಧ್ಯಮದ 13 ಪಠ್ಯಪುಸ್ತಕ ಕೊರತೆ ಇತ್ತು. ಎಸ್ಡಿಎಂಸಿಯವರು ಸರಕಾರದಿಂದ ಬರುವವರೆಗೆ ಕಾಯದೆ ತಕ್ಷಣ ಪುಸ್ತಕದ ಝೆರಾಕ್ಸ್ ಪ್ರತಿ ಮಾಡಿಸಿಕೊಂಡು ಎಲ್ಲ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ. ಬದ್ಧತೆ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ. ನಾವೆಲ್ಲಾ ಸೇರಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಸರಕಾರ ಮತ್ತು ಗ್ರಾಮಸ್ಥರು ಪ್ರೋತ್ಸಾಹ ನೀಡಿದರೆ ಈ ಶಾಲೆಯನ್ನು ಮತ್ತಷ್ಟು ಬೆಳೆಸಲು ಸಾಧ್ಯವಿದೆ.
ಇಷ್ಟೆಲ್ಲಾ ಸೌಲಭ್ಯಗಳ ನಡುವೆ ಒಂದಷ್ಟು ಕೊರತೆ ಇಲ್ಲಿದೆ. ಶಾಲೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಹೆಂಚಿನಿಂದ ಕೂಡಿದ ಈ ಕಟಡದಲ್ಲಿ ಕೊಠಡಿಯ ಕೊರತೆಯೂ ಇದೆ. ಮುಂದಿನ ವರ್ಷದಿಂದ ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೊಸ ಕೊಠಡಿಗಾಗಿ ಕಟ್ಟಡ ನಿರ್ಮಾಣದ ಬೇಡಿಕೆಯನ್ನು ಶಾಸಕರು, ಡಿಡಿಪಿಐ, ಬಿಇಒ ಮುಂದೆ ಎಸ್ಡಿಎಂಸಿ ಪದಾಧಿಕಾರಿಗಳು ಮುಂದಿಟ್ಟಿದ್ದಾರೆ.

Related posts

Leave a Reply

Your email address will not be published. Required fields are marked *