Header Ads
Breaking News

ಸೀಮಂತದಲ್ಲಿ ಹಸಿರು‌ ಶ್ರೀಮಂತ : ಮಾವಿನಕಟ್ಟೆ ಮೂಡಾಯಿಬೆಟ್ಟು ಮನೆಯಲ್ಲಿ ಪರಿಸರಸ್ನೇಹಿ ಕಾರ್ಯಕ್ರಮ

ವಾಮದಪದವು: ಸೃಜನಶೀಲ ಮನಸ್ಸುಗಳುಳ್ಳ ಮನೆಗಳು ಎಲ್ಲೆಲ್ಲೂ ಹೊಸತನವನ್ನು ಸೃಷ್ಠಿಸುತ್ತವೆ ಮತ್ತು ಎಲ್ಲದರಲ್ಲೂ ಹೊಸತನವನ್ನು ಹುಡುಕಾಡುತ್ತವೆ ಎಂಬುದಕ್ಕೆ ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ಮನೆ ಸಾಕ್ಷಿಯಾಯಿತು.ಈ ಮನೆಯ ಹೆಸರೇ ಗುಬ್ಬಚ್ಚಿಗೂಡು, ಅರ್ಥಾತ್ ಇದು ಪಕ್ಷಿ ಸಂರಕ್ಷಣಾ ಜಾಗೃತಿಯ ನೆಲೆಬೀಡು. ಗುಬ್ಬಚ್ಚಿ‌ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ಅವರ ಪತ್ನಿ ರಮ್ಯ ನಿತ್ಯಾನಂದ ಶೆಟ್ಟಿಯವರ ಸೀಮಂತವನ್ನು ಗುರುವಾರ ” ಸೀಮಂತದಲ್ಲಿ ಹಸಿರು ಶ್ರೀಮಂತ” ಎಂಬ ಕಲ್ಪನೆಯೊಂದಿಗೆ ಪರಿಸರಸ್ನೇಹಿಯಾಗಿ ವಿಶಿಷ್ಠವಾಗಿ ಆಚರಿಸಲಾಯಿತು.ಕೃಷಿಕರಾಗಿರುವ ನಿತ್ಯಾನಂದ ಶೆಟ್ಟಿ ಅವರು ಪಕ್ಷಿ, ಪತಂಗ, ಜೀವಿಸಂಕುಲ ಸಹಿತ ಪರಿಸರದ ಉಳಿವಿಗಾಗಿ ಕಳೆದ ಹಲವಾರು ವರ್ಷಗಳಿಂದ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದು ಇದರ ಯಶಸ್ವಿಯಲ್ಲಿ ಪತ್ನಿ ರಮ್ಯ ಅವರ ಸದಾಭಿರುಚಿಯ ಸಹಕಾರ ಮಹತ್ತರವಾದುದು. ಈ ಹಿನ್ನೆಲೆಯಲ್ಲಿ ಪತ್ನಿಯ ಸೀಮಂತವನ್ನು ಹಸಿರುಮಯವಾಗಿ ರೂಪಿಸುವ ಉದ್ಧೇಶದ ಈ ಕಾರ್ಯಕ್ರಮ ನೆರೆದವರ ಮನದಲ್ಲಿ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಪ್ರಮೇಶ ಧ್ವಾರದಲ್ಲಿ ಸಾಂಪ್ರಧಾಯಿಕ ಬಾಳೆದಿಂಡು ಕಾಯಿ ಎಲೆಗಳ ಹಸಿರು ತೋರಣ, ಅಲ್ಲಲ್ಲಿ ಮೂಂಡಿ ಎಲೆಯಲ್ಲಿ ಬರೆದು ಹಾಕಲಾದ ಪರಿಸರ ಸಂರಕ್ಷಣೆಯ ಜಾಗೃತಿ ಫಲಕಗಳು, ಎಲ್ಲೆಂದರಲ್ಲಿ ಹಾರಿ ಬರುವ ಪಕ್ಷಿಗಳ ನೀರಾಡಿಕೆ ನಿವಾರಿಸಲು ಅಲ್ಲಲ್ಲಿ ಇಟ್ಟ ಮಣ್ಣಿನ ಮಡಿಕೆಗಳು, ಊಟೋಪಚಾರದಲ್ಲಿ‌ ಪ್ಲಾಸ್ಟಿಕ್ ಮುಕ್ತ ಸಲಕರಣೆಗಳ ಬಳಕೆ, ಸಮಾರಂಭದಲ್ಲಿ ನೆರೆದ ಬಂಧುಮಿತ್ರರ ಮನೆಗೊಂದು ಬಾಳೆಗಿಡಗಳ ವಿತರಣೆ, ಪಕ್ಷಿಗಳ ಆಹಾರ ಸಾಮಾಗ್ರಿ ಮತ್ತು‌ ಪಕ್ಷಿ ಪತಂಗ ಲೋಕದ ಸಂರಕ್ಷಣೆಯ ಕರಪತ್ರ ಹಂಚಿಕೆ ಸೀಮಂತ ಕಾರ್ಯಕ್ರಮದಲ್ಲಿ ಹೃದಯ ಶ್ರೀಮಂತಿಕೆಯ ದ್ಯೋತಕವಾಗಿ ಗಮನ ಸೆಳೆಯಿತು.

ನಿತ್ಯಾನಂದ ಶೆಟ್ಟಿ ಬದ್ಯಾರು ಮತ್ತು ರಮ್ಯ ನಿತ್ಯಾನಂದ ಶೆಟ್ಟಿ ” ಗುಬ್ಬಚ್ಚಿ ಗೂಡು” ಜಾಗೃತಿ ಅಭಿಯಾನದ ರೂವಾರಿಗಳಾಗಿ ಚಿರಪರಿಚಿತರು.ಕಳೆದ ಅನೇಕ ವರ್ಷಗಳಿಂದ ಪಕ್ಷಿ, ಪತಂಗ ಹಾಗೂ ಪರಿಸರ ಸಂರಕ್ಷಣೆಗಾಗಿ ಅಲ್ಲಲ್ಲಿ‌ ಮಾಹಿತಿ ಕಾರ್ಯಕ್ರಮ, ಕರಪತ್ರ ಹಂಚಿಕೆ, ಸೈಕಲ್ ಜಾಥಾ, ಮನೆಯ ಪರಿಸರದಲ್ಲಿ ಪಕ್ಷಿಗಳಿಗೆ ಮಣ್ಣಿನ ಪಾತ್ರೆಯಲ್ಲಿ ನೀರು ಮತ್ತು ಆಹಾರ ಧಾನ್ಯಗಳ ಪೂರೈಕೆಯ ವ್ಯವಸ್ಥೆಯೊಂದಿಗೆ
ಪರಿಸರ ಸ್ನೇಹಿಯಾಗಿ ಬದುಕು ನಡೆಸಿದವರು.ಇದೀಗ ಸಾಂಸಾರಿಕ ಬದುಕಿನ ಸಂಕೇತವಾದ ಸೀಮಂತವನ್ನು ಹಸಿರುಮಯವನ್ನಾಗಿಸುಮೂಲಕ ಪರಿಸರಪ್ರೇಮಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾರ್ಯಕ್ರಮದ ಆಮಂತ್ರಣವು ಹಸಿರುಮಯವಾಗಿದ್ದು ಕಾರ್ಯಕ್ರಮಗಳ ವಿವರಣೆಗಳನ್ನು ಬಾಳೆಎಲೆಯಲ್ಲಿ ಬಿಳಿ ಬಣ್ಣದಲ್ಲಿ ಬರೆದು ಹಾಕಿದ್ದು ಗಮನ ವಿಶೇಷ ಸೆಳೆಯಿತು.

ಸೀಮಂತಕ್ಕೆ ಪೂರ್ವಭಾವಿಯಾಗಿ ಬುಧವಾರ ರಾತ್ರಿ ” ಹಣತೆಗಳ ಬೆಳಕಿನೊಂದಿಗೆ ಗುಬ್ಬಚ್ಚಿ ಗೂಡು ಕಲಾಸಂಜೆ” ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಲು ಸಾಲು ಹಣತೆಗಳ ಬೆಳಕಿನೊಂದಿಗೆ ಪ್ರಜ್ವಲಿಸಿದ ಮನೆಯ ಅಂಗಣದಲ್ಲಿ ಮುರದಮೇಲು ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಉರಗ ಸಂರಕ್ಷಕ ಸ್ನೇಕ್ ಕಿರಣ್ ಪಿಂಟೋ ಅವರೊಂದಿಗೆ ಸಂವಾದ, ಪ್ರಜ್ಣಾ ಅಳದಂಗಡಿ ಅವರಿಂದ ಪಕ್ಷಿಗಳ ಕಲರವದ ಮಿಮಿಕ್ರಿ, ನಿತ್ಯರಮ್ಯ ಜೀವಜಗತ್ತು ವೀಡಿಯೋ ಕಂಬಳ ಕ್ಷೇತ್ರದ ಸಾಧಕರಾದ ಹಕ್ಕೇರಿ ಸುರೇಶ್ ಶೆಟ್ಟಿ ಮತ್ತು ಮಿಜಾರು ಅಶ್ವಥಪುರ , ಶ್ರೀನಿವಾಸ ಗೌಡ ಅವರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಜನಾಕರ್ಷಣೆಗೆ ಪಾತ್ರವಾಯಿತು.

ಗಮನ ಸೆಳೆದ ಜಾಗೃತಿ ಸಂದೇಶಗಳು:ಪಕ್ಷಿಗಳ ಬಂಧನ ತರವಲ್ಲ, ಅವುಗಳನ್ನು ಬದುಕಲು ಬಿಡಿ.ಪ್ರಕೃತಿಗೆ ಶರಣಾಗೋಣ.ಇಲ್ಲದಿದ್ದರೆ ಪ್ರಕೃತಿಯೇ ನಮ್ಮನ್ನು ಶರಣಾಗಿಸುತ್ತದೆ.ಪಕ್ಷಿಗಳ ಗೂಡನ್ನು ಮುಟ್ಟದಿರಿ, ಅವುಗಳ ಮೊಟ್ಟೆಯನ್ನು ಒಡೆಯದಿರಿ.“ನೀರು, ಆಹಾರ, ಆವಾಸಸ್ಥಾನದ ಕೊರತೆ ನಸಹಿತ ಮನುಷ್ಯನ ಉಪಟಳದಿಂದ ಪಕ್ಷಿಗಳ ಸಂತತಿ ನಾಶವಾಗುತ್ತಿದೆ. ಮನೆಯ ಸುತ್ತಮುತ್ತ ಮಣ್ಣಿನ ಪಾತ್ರೆಯಲ್ಲಿ ನೀರಿಡುವುದು, ಪಕ್ಷಿ ಮತ್ತು ಪತಂಗಗಳಿಗೆ ಆಕರ್ಷಣೆಯಾಗುವ ಗಿಡಮರಗಳನ್ನು ಬೆಳೆಸುವುದು, ಪಕ್ಷಿಗಳಿಗೆ ಆವಾಸ ಸ್ಥಾನ ಮತ್ತು ಆಹಾರ ದೊರಕುವ ವ್ಯವಸ್ಥೆ ಕಲ್ಪಿಸುವುದು, ಪಕ್ಷಿ ಸಹಿತ ಜೀವಿ ಸಂಕುಲಗಳ ಬದುಕಿಗೆ ಮಾರಕವಾಗಿರುವ ಪ್ಲಾಸ್ಟಿಕ್ವ್ ಬಳಕೆಯಿಂದ ಮುಕ್ತವಾಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ‌ ಮೂಡಿಸುವುದಕ್ಕಾಗಿ ನಮ್ಮ ಮನೆಯ ಸೀಮಂತ ಕಾರ್ಯಕ್ರಮವನ್ನು‌ ಇಂದು‌ ವಿಶೇಷ ರೀತಿಯಲ್ಲಿ‌ಆಚರಿಸಲಾಗಿದೆ”- ನಿತ್ಯಾನಂದ ಶೆಟ್ಟಿ

Related posts

Leave a Reply

Your email address will not be published. Required fields are marked *