Header Ads
Breaking News

ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ಸುಟ್ಟು ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ

ಸುಟ್ಟು ಕರಕಲಾದ ಸ್ಥಿತಿಯಲ್ಲಿ ದಂಪತಿ ಶವ ಮನೆಯೊಳಗಡೆ ಪತ್ತೆಯಾದ ಘಟನೆ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ನಡೆದಿದ್ದು, ಆತ್ಮಹತ್ಯೆಯೋ ಆಕಸ್ಮಿಕ ಸಾವೇ ಎಂಬುದು ಮರಣೋತ್ತರ ಪರೀಕ್ಷೆಯಿಂದತಿಳಿದುಬರಬೇಕಿದೆ. ಮಂಗಳೂರು ತಾಲೂಕಿನ ತೊಕ್ಕೊಟ್ಟು ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಯ ಬಳಿ ನಿವಾಸಿಗಳಾದ ಪದ್ಮನಾಭ(75)ವಿಮಲಾ(60)ದಂಪತಿ ದಾರುಣ ಸಾವನ್ನಪ್ಪಿದ್ದು ನಿನ್ನೆ ಸಂಜೆ ಘಟನೆ ಬೆಳಕಿಗೆ ಬoದಿದೆ.

ಮೃತರಿಗೆ ಇಬ್ಬರು ಪುತ್ರರು ಪುತ್ರಿ ಸೇರಿದಂತೆ ಮೂರು ಮಕ್ಕಳಿದ್ದು ಅವರೆಲ್ಲರೂ ವಿವಾಹಿತರಾಗಿದ್ದು ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ದಂಪತಿ ಮಾತ್ರ ಸ್ವಾಭಿಮಾನದಿಂದ ಯಾವ ಮಕ್ಕಳ ಮನೆಯಲ್ಲಿಯೂ ತುಂಬ ದಿನ ಉಳಿದುಕೊಳ್ಳುತ್ತಿರಲಿಲ್ಲ. ದಂಪತಿ ಚೆಂಬುಗುಡ್ಡೆಯ ಮನೆಯಲ್ಲಿಯೇ ವಾಸಿಸುತ್ತಿದ್ದರು. ಬುಧವಾರ ಮಧ್ಯಾಹ್ನ ಪದ್ಮನಾಭ ಅವರ ಮಗಳ ಗಂಡ ಉಮಾನಾಥ್ ಅವರು ಚೆಂಬುಗುಡ್ಡೆಯ ಮನೆಗೆ ಬಂದಿದ್ದು ಬಾಗಿಲು ತಟ್ಟಿದಾಗ ಯಾರೂ ಬಾಗಿಲು ತೆರೆಯಲಿಲ್ಲ. ಬಳಿಕ ಹಿಂದಿನ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದುದು ಉಮಾನಾಥ್ ಅವರಿಗೆ ಅನುಮಾನ ಬರುವಂತೆ ಮಾಡಿದೆ. ಮನೆಯ ಒಳಗಿನಿಂದ ದುರ್ನಾತ ಬಂದಿದ್ದು, ನೊಣಗಳು ಓಡಾಡೋದನ್ನು ಗಮನಿಸಿದ ಉಮಾನಾಥ್ ಅವರು ಸ್ಥಳೀಯರ ಸಹಕಾರದಿಂದ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಉಳ್ಳಾಲ ಪೊಲೀಸರು ಆಗಮಿಸಿ ಬಾಗಿಲ ಚಿಲಕ ಒಡೆದು ಒಳಪ್ರವೇಶಿಸಿದಾಗ ದಂಪತಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಪದ್ಮನಾಭ ಅವರ ಆರೋಗ್ಯ ಕಳೆದ ಕೆಲವು ತಿಂಗಳಿನಿಂದ ಹದಗೆಟ್ಟಿದ್ದುಆ ಕಾರಣದಿಂದ ಆಗಾಗ್ಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುತ್ತಿದ್ದರು. ಮಗಳು ಕನ್ಯಾನದಲ್ಲಿರುವ ಮನೆಗೆ ಬಂದು ವಾಸಿಸುವಂತೆ ಹಲವು ಬಾರಿ ಕೇಳಿದ್ದರೂ ಸುತರಾಂ ಒಪ್ಪಿರಲಿಲ್ಲ. ಆರೋಗ್ಯ ಹದಗೆಟ್ಟಾಗಲೂ ತೆರಳಲಿಲ್ಲ. ದಂಪತಿ ಅಕ್ಕಪಕ್ಕದ ಮನೆಮಂದಿಯ ಜೊತೆಗಾಗಲೀ ಇತರರ ಜೊತೆಗಾಗಲೀ ಹೆಚ್ಚು ಬೆರೆಯುತ್ತಿರಲಿಲ್ಲ ಎನ್ನಲಾಗಿದೆ. ಸರಕಾರದಿಂದ ಸಿಗುತ್ತಿದ್ದ ವೃದ್ಧಾಪ್ಯ ವೇತನದಲ್ಲಿ ಜೀವನ ಸಾಗಿಸುತ್ತಿದ್ದರು. ಮಕ್ಕಳು ಸಹಾಯ ಮಾಡಿದರೂ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ. ಸ್ವಾಭಿಮಾನಿಗಳಾಗಿದ್ದ ದಂಪತಿ ಬದುಕಿದರೂ ಸತ್ತರೂ ಇಲ್ಲಿಯೇ ಎಂದು ಹೇಳುತ್ತಿದ್ದರು ಎನ್ನಲಾಗಿದೆ.

ನಿತ್ಯವೂ ಮೊಬೈಲ್ ಮೂಲಕ ಕುಶಲೋಪಚಾರ ಮಾಡುತ್ತಿದ್ದ ಮಗಳು ಸೋಮವಾರ ಪೋಷಕರ ಜೊತೆ ಮಾತನಾಡಿದ್ದು ತುಂಬ ಖುಷಿಯಲ್ಲಿದರು ಎಂದು ತಿಳಿಸಿದ್ದಾರೆ. ಮಂಗಳವಾರ ಮೊಬೈಲ್‌ಗೆ ಬಹಳಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸದಿರುವುದರಿಂದ ತಂದೆ ಆಸ್ಪತ್ರೆಯಲ್ಲಿದಾಖಲಾಗಿರಬಹುದೆಂದು, ಹಾಗಾಗಿ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಹೋಗಿರಬಹುದೆಂದು ಸಮಾಧಾನ ಪಟ್ಟುಕೊಂಡಿದ್ದರು. ಹಾಗಿದ್ದರೂ ಮಗಳ ಗಂಡ ಬುಧವಾರ ಚೆಂಬುಗುಡ್ಡೆಯ ಮನೆಗೆ ಬಂದಿದ್ದು ಬಳಿಕ ಅತ್ತೆ ಮಾವನ ಶವ ಕಂಡು ಬೆಚ್ಚಿದ್ದಾರೆ.

ಮನೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದು ಅಡುಗೆ ಕೋಣೆಯಲ್ಲಿ ಪದ್ಮನಾಭ್ ಮತ್ತು ವಿಮಲ ದಂಪತಿಗಳ ಶವ ಸಂಪೂರ್ಣ ಕೊಳೆತು ಸುಟ್ಟ ರೀತಿಯಲ್ಲಿ ಪತ್ತೆಯಾಗಿವೆ. ದಂಪತಿಗಳು ಮಾನಸಿಕ ಖಿನ್ನತೆಯಿಂದ ಸೋಮವಾರ ರಾತ್ರಿ ಬೆಂಕಿ ಹಚ್ಚಿಕೊಂಡಿರಬೇಕು ಅಥವಾ ಸ್ಪಿರಿಟ್‌ನಂತಹ ವಿಷಸೇವಿಸಿ ಆತ್ಮಹತ್ಯೆಗೈದಿರಬೇಕು ಅಥವಾ ಆಕಸ್ಮಿಕವಾಗಿ ಬೆಂಕಿ ತಗಲಿ ಸಾವನ್ನಪಿರಬೇಕು ಎಂದು ಮೃತರ ಅಳಿಯ ಉಮಾನಾಥ್ ಸಹಿತ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಉಪ ವಿಭಾಗ ಎಸಿಪಿ ರಾಮರಾವ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಎಸ್‌ಐ ಗುರುವಪ್ಪ ಕಾಂತಿ, ಎಎಸ್‌ಐ ಶಾಂತಪ್ಪ ಮತ್ತು ಸಿಬ್ಬಂದಿ ಪರಿಶೀಲಿಸಿದ್ದಾರೆ. ಉಳ್ಳಾಲ ಪೊಲೀಸರು ಸಂಪೂರ್ಣ ಕೊಳೆತ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಿದ್ದಾರೆ.

Related posts

Leave a Reply

Your email address will not be published. Required fields are marked *