
ಬೀದಿ ಮಡೆಸ್ನಾನ :ಸುಬ್ರಹ್ಮಣ್ಯದಲ್ಲಿ ಇರುವ ಸೇವೆಗಳಲ್ಲಿ ಅತೀ ಕಠಿಣವಾದ ಹಾಗೂ ಸುಬ್ಬಪ್ಪನಿಗೆ ಅತೀ ಪ್ರಿಯವಾದ ಸೇವೆ ಎಂದರೆ ಅದು ಬೀದಿ ಮಡೆಸ್ನಾನ. ಈ ವಿಶಿಷ್ಠ ಸೇವೆಯು ಲಕ್ಷದೀಪದ ರಾತ್ರಿಯಿಂದ ಷಷ್ಠಿ ರಥ ಎಳೆಯುವ ತನಕ ನಡೆಯುತ್ತದೆ.
ಮಡೆಸ್ನಾನದ ವಿಧಾನ: :48 ದಿವಸಗಳ ವೃತ ಹಾಗೂ ಒಪ್ಪೊತ್ತಿನ ಊಟವನ್ನು ಮಾಡಿ ಅನುದಿನವೂ ಭಗವಂತನ ಚಿಂತನೆಯಲ್ಲಿದ್ದರೆ ಉತ್ತಮ. ಇದನ್ನು ಲಿಂಗ ಹಾಗೂ ಜಾತಿ ಬೇಧವಿಲ್ಲದೆ ಎಲ್ಲ ಆಸಕ್ತರು ಮಾಡಬಹುದಾಗಿದ್ದು,ಸೇವಾರ್ಥಿಗಳು ರಾತ್ರಿ, ಮುಂಜಾನೆ ಕುಮಾರಾಧಾರದಲ್ಲಿ ಸ್ನಾನ ಮಾಡಿ ಸ್ನಾನ ಘಟ್ಟದಿಂದ ನೆಲದಲ್ಲಿ ಹೊರಳಾಡುತ್ತಾ ಅಂದರೆ ಸಾಷ್ಟಾಂಗ ನಮಸ್ಕಾರ ರೂಪದಲ್ಲಿ ಬಂದು ರಾಜ ಬೀದಿ,ರಥಬೀದಿಯಲ್ಲಿ ಬಂದು ದೇವಸ್ಥಾನದ ಒಳಗೆ ಹೊರಳಾ ಡುತ್ತಾ ಬರಬೇಕು. ದೇವರಿಗೆ ಪ್ರದಕ್ಷಿಣೆ ಹಾಕಿ ದರ್ಪಣ ತೀರ್ಥದಲ್ಲಿ ಮಿಂದು ಶ್ರೀ ಕಾರ್ತಿಕೇಯನ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದಲ್ಲಿ ಈ ಸೇವೆಯು ಅಂತ್ಯವಾಗುತ್ತದೆ. ಈ ಸೇವೆಯನ್ನು ಮಾಡಲು ಅತೀ ಕಠಿಣ ವಾದ ಮನ ಸಂಕಲ್ಪ ಹೊಂದಿರುವುದು ಅವಶ್ಯಕ. ಮನೆಯ ಸದಸ್ಯರ ಹಾಗೂ ದಾಸಯ್ಯರ ಸಹಕಾರ ಇದ್ದರೆ ಈ ಸೇವೆಯನ್ನು ಮಾಡಲು ಸುಲಭ ವಾಗುತ್ತದೆ.
ಸೇವೆಯ ಫಲ:ಇದನ್ನು ಮಾಡುವ ಉದ್ದೇಶ ಭಗವಂತನಲ್ಲಿ ಒಂದಾಗುವುದರ ಮೂಲಕ, ಮಕ್ಕಳಿಲ್ಲದವರಿಗೆ,ಮಾನಸಿಕ ನೆಮ್ಮದಿ ಇಲ್ಲದವರಿಗೆ ಕುಷ್ಠರೋಗ ಚರ್ಮರೋಗ ಇನ್ನಿತರ ಕಠಿಣ ಸಮಸ್ಯೆಗಳುಳ್ಳ ಭಕ್ತರಿಗೆ ಪರಿಹಾರ ದೊರೆಯುತ್ತದೆಇದನ್ನು ಮಾಡಿದವರಿಗೆ ಬ್ರಹ್ಮರಥ ಎಳೆದ ಸೇವೆ ಮಾಡಿಸಿದ ಫಲ ಇದೆ ಎಂಬ ಪ್ರತೀತಿ. ಈ ಹಿಂದೆ ಶ್ರೀ ಕೃಷ್ಣ ಹಾಗೂ ಜಾಂಬವತಿ ಪುತ್ರ ಸಂಭಾನು ಶಾಪಗ್ರಸ್ಥ ನಾಗಿ ಈ ಸೇವೆಯನ್ನು ಮಾಡಿ ಅದರಿಂದ ಮುಕ್ತಿ ಹೊಂದಿದನೆಂದು ನಂಬಲಾಗಿದೆ.
ಪ್ರತಿವರ್ಷ ಈ ಸೇವೆಯನ್ನು ಮಾಡುವ ಅಸಂಖ್ಯಾತ ಭಕ್ತರಿದ್ದಾರೆ.ಅದರಲ್ಲಿ ಒಬ್ಬರಾದ ದೇವಸ್ಥಾನ ದ ಗಣೇಶ್ ಭಟ್ ರವರು 18 ವರ್ಷಗಳಿಂದ ಈ ಸೇವೆಯನ್ನು ಮನಃಶಾಂತಿ ಗಾಗಿ ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಇನ್ನೋರ್ವ ಭಕ್ತ ಹರೀಶ್ ಕೊಟ್ಟಾರಿ ಕೂಡ 18 ವರ್ಷಗಳಿಂದ ಈ ಸೇವೆಯನ್ನು ಪ್ರತೀ 5 ದಿವಸ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಎಲ್ಲ ಸುಬ್ರಹ್ಮಣ್ಯ ನ ದಯೆ ಎನ್ನುವುದು ಅವರ ಅಭಿಪ್ರಾಯ