

ಸೆಸ್ ಏರಿಕೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಮಂಗಳೂರು ಬಂದರು ಅಡಿಕೆ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ಶನಿವಾರದಿಂದ ವ್ಯಾಪಾರ ಸ್ಥಗಿತಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಪ್ರತಿಶತ 35 ಪೈಸೆಯಿಂದ 1 ರೂಪಾಯಿಗೆ ಏರಿಕೆ ಮಾಡಿರುವ ಮಾರುಕಟ್ಟೆ ಶುಲ್ಕವನ್ನು ಮೊದಲಿನಂತೆ 35 ಪೈಸೆಗೆ ಇಳಿಸುವಂತೆ ಒತ್ತಾಯಿಸಿರುವ ವ್ಯಾಪಾರಸ್ಥರು ಬಂದ್ನ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯಿದೆಯನ್ನು ವ್ಯಾಪಾರಿಗಳು ಸ್ವಾಗತಿಸಿದ್ದು ರೈತರಿಗೆ ಮುಕ್ತ ಮಾರುಕಟ್ಟೆಯಿಂದ ಲಾಭವಿದೆ.ವ್ಯಾಪಾರಿಗಳಿಗೂ ಅನುಕೂಲ. ಹೀಗಾಗಿ ಎಪಿಎಂಸಿಯ ಅವಶ್ಯಕತೆಯಿಲ್ಲ.ಅದನ್ನು ರದ್ದು ಪಡಿಸಬೇಕು ಎಂದು ವ್ಯಾಪಾರಸ್ಥರು ಒತ್ತಾಯಿಸಿದರು. ಅಡಿಕೆ ಶಿಪ್ಪರ್ಸ್ ಆಂಡ್ ಬ್ರೋಕರ್ಸ್ ಎಸೋಸಿಯೆಷನ್ ಅಧ್ಯಕ್ಷ ದೇವಾನಂದ ಪೈ ಅವರು ಮಾತನಾಡಿ ಸರಕಾರ .35 ರಷ್ಟು ಇದ್ದ ಶುಲ್ಕವನ್ನು ಏಕಾಏಕಿ ಏರಿಸಿದೆ.ಇದರಿಂದ ರೈತರಿಗೆ,ವ್ಯಾಪರಸ್ಥರಿಗೆ ದೊಡ್ಡ ಹೊಡೆತಬಿದ್ದಿದೆ.ಕೇಂದ್ರ ಸರಕಾರ ಎಪಿಎಂಸಿ ಸಹಿತ ಕೃಷಿ ಕಾಯಿದೆಗೆ ತಿದ್ದು ಪಡಿ ಮಾಡಿದ್ದು ಸ್ವಾಗತಾರ್ಹ.ಆದರೆ ರಾಜ್ಯ ಸರಕಾರ ಶುಲ್ಕ ಏರಿಕೆಯಿಂದ ಸಮಸ್ಯೆಯಾಗಿದೆ.ಕೂಡಲೇ ಸಂಸದರು, ಶಾಸಕರು ಮಧ್ಯ ಪ್ರವೇಶಿಸಿ ಈ ಹಿಂದಿನಂತೆ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.
ಬೈಕಂಪಾಡಿ ವರ್ತಕರ ಸಂಘದ ಕಾರ್ಯದರ್ಶಿ,ವಉದ್ಯಮಿ ಪ್ರಕಾಶ್ ಕಲ್ಬಾವಿ ಅವರು ಸರಕಾರ ನಿರ್ಧಾರ ವ್ಯಾಪಾರಿಗಳಿಗೆ ಹೊಡೆತ ನೀಡಿದೆ. ಕೇರಳದಲ್ಲಿ ಎಪಿಎಂಸಿ ಇಲ್ಲದ ಕಾರಣ ವರ್ತಕರು ಆ ಕಡೆ ತೆರಳುತ್ತಿದ್ದಾರೆ. ಇಲ್ಲಿನ ಎಪಿಎಂಸಿ ರದ್ದು ಮಾಡಿ ರೈತರಿಗೆ ಉದ್ಯಮಿಗಳಿಗೆ ಅನುಕೂಲವಾದ ಕೇಂದ್ರದ ಕಾಯಿದೆ ಜಾರಿ ಮಾಡಿ ಎಂದು ಒತ್ತಾಯಿಸಿದರು.ಸರಕಾರ ತನ್ನ ನಿರ್ದಾರದಿಂದ ಹಿಂದೆ ಸರಿಯದಿದ್ದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು. ಮಂಗಳೂರು ಮರ್ಚೆಂಟ್ ಎಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ರೆಹಿಮಾನ್ ಸರಕಾರ ರೈತರಿಗೆ ಅನುಕೂಲ ಮಾಡುವ ಬದಲು ಹೆಚ್ಚು ಶುಲ್ಕ ಪಾವತಿಸುವ ಕೆಲಸ ಮಾಡಿದೆ. ಎಪಿಎಂಸಿಯು ಕೇಂದ್ರದ ಹೊಸ ಕಾಯಿದೆಯಿಂದ ಮಹತ್ವ ಕಳೆದುಕೊಂಡಿದೆ.ರದ್ದು ಮಾಡಬೇಕು.ದೇಶದ ಇತರೆಡೆ ರದ್ದು ಮಾಡುವ ಕೆಲಸವನ್ನು ಆಯಾ ರಾಜ್ಯಗಳು ಮಾಡುತ್ತಿವೆ ಎಂದರು. ರಾಘವ ಶೆಟ್ಟಿ ,ಅನ್ವರ್ ಹುಸೈನ್,ಸುನೀಲ್ ರತಿಲಾಲ್,ಕಲ್ಪೇಶ್,ರಮೇಶ್ ಪಟೇಲ್, ಅಡಿಕೆ ವ್ಯಾಪಾರ ಸ್ಥರ ಸಂಘದ ಪದಾಧಿಕಾರಿಗಳು, ವರ್ತಕರು ಉಪಸ್ಥಿತರಿದ್ದರು.