Header Ads
Breaking News

ಸ್ವಾತಂತ್ರ್ಯ ಬಂದು 70ವರ್ಷ ಕಳೆದರೂ ಕುಂದಣಬೈಲು ಕುಗ್ರಾಮವೇ!

ಆ ಕುಗ್ರಾಮದಲ್ಲಿ ಹಲೋ ಎನ್ನಲು ನಾಲ್ಕು ಕಿಮೀ ನಡೆಯಬೇಕು..! ಅದೂ ಕೂಡ ಬಿಎಸ್‌ಎನ್‌ಎಲ್ ಸಿಮ್ ಇದ್ದರೆ ಮಾತ್ರ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಕೂಡ ಮೊಬೈಲ್ ರಿಂಗಣಸಿದ ಊರು ಇದೆ ಎನ್ನೋದು ನಂಬೋದು ಕಷ್ಟವಾದರೂ ಇದು ವಾಸ್ತವ ಸತ್ಯ! 2ಜಿ, 3ಜಿ ಕಾಲ ಹೋಗಿ 4ಜಿ ಕಾಲ ಬಂದರೂ ಗ್ರಾಮೀಣ ಭಾಗದ ನೆಟ್‌ವರ್ಕ್ ಸಂಪರ್ಕ ಸುಧಾರಿಸಿಲ್ಲ ಎನ್ನೋದಕ್ಕೆ ಇಲ್ಲಿದೆ ಸಾಕ್ಷಿ.


ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಕಮಲಶಿಲೆ ಬ್ರಾಹ್ಮೀಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಫೋನ್ ಸಂಪರ್ಕವಿಲ್ಲದ ಊರೊಂದಿದೆ. ಆ ಊರ ಹೆಸರೇ ಹಳ್ಳಿಹೊಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಂದಣಬೈಲು. ಬೈಂದೂರು ವಿಧಾನ ಸಭಾ ಕ್ಷೇತ್ರ ರಾಜ್ಯದ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಒಂದು. ಅಲ್ಲದೇ ಅತೀ ಹೆಚ್ಚು ಕುಗ್ರಾಮಗಳ ಪ್ರದೇಶವೂ ಹೌದು. ಹತ್ತು ಹಲವು ಇಲ್ಲಗಳ ನಡುವೆ ನಲಗುತ್ತಿರುವ ಬೈಂದೂರು ಕ್ಷೇತ್ರದ ಕುಂದಣಬೈಲಿನಲ್ಲಿ ಮೊಬೈಲ್ ಫೋನಿಗೆ ಜೀವ ಬರಬೇಕಿದ್ದರೆ ಆ ಕಡೆ ನಾಲ್ಕು ಕಿಮೀ, ಈ ಕಡೆ ಆರು ಕಿಮೀ ಕ್ರಮಿಸಿ ಮೊಬೈಲ್ ಆನ್ ಮಾಡಬೇಕಾದ ಪರಿಸ್ಥಿತಿ ಇಲ್ಲಿನ ಜನರದು.

ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಕುಂದಣಬೈಲು ಪ್ರದೇಶದಲ್ಲಿ 350ಮನೆಯಿದ್ದು, 1400ಕ್ಕೂ ಮಿಕ್ಕಿ ಜನ ಸಂಖ್ಯೆಯಿದೆ. ವಾಟೆಬಚ್ಚಲು, ಮಾವಿನಕುದ್ರು, ಮದ್ದಾಣಿ, ಕಾರಿಬೈಲು, ಮೇಳ್ಯಾ, ವರಂಪಾಲು ಎಂಬ ಹೆಸರಿನ ಊರಿಗಳು ಬರುತ್ತವೆ. ಕಾರಿಬೈಲು ಪ್ರದೇಶದಲ್ಲಿ ನಲವತ್ತಕ್ಕೂ ಮಿಕ್ಕಿ ಎಸ್ಸಿಎಸ್ಟಿ ಕುಟುಂಬ ಇದೆ. ಆದರೂ ಕುಂದಣಬೈಲಿಗೆ ಫೋನ್ ಮಾತ್ರ ಕಬ್ಬಿಣದ ಕಡಲೆ. ಇಡೀ ದೇಶ ಡಿಜಿಟಲ್ ಕ್ರಾಂತಿಕಹಳೆ ಮೊಳಗಿಸುತ್ತಿದ್ದರೂ ಕುಂದಣಬೈಲು ಮೊಬೈಲ್ ರಿಂಗಣ ರಹಿತ ಪ್ರದೇಶ.
ಕುಂದಣಬೈಲು ಊರಿಗೆ ಕುಂದಣಬೈಲು ಹೆಸರು ಬರಲು ಕುಂದಣ ಪಾಳೆಗಾರ ಕಾರಣ. ಕುಂದಣಬೈಲು ಗ್ರಾಮೀಣ ಭಾಗದ ಜನರ ಬಾಯಲ್ಲಿ ಸಂಕುಚಿಗೊಂಡು ಕುಂದ್ಲುಬೈಲು ಆಗಿದೆ. ಕೆಲವರು ಕುಂದ್ಲಬೈಲು ಎಂದರೆ ಮತ್ತೆ ಕೆಲವರು ಕುಂದ್ಣಬೈಲು ಎನ್ನುತ್ತಾರೆ. ಇದು ಕುಂದಣ ಪಾಳೆಗಾರ ಕಾರ್‌ಬಾರ್ ನಡೆಸಿದ ಮಾಗಣಿ ಗ್ರಾಮವಾಗಿತ್ತು. ಹಳ್ಳಿಹೊಳೆ, ಚಕ್ರಾಮೈದಾನ, ಕಮಲಶಿಲೆ, ಮುದೂರು, ಜಡ್ಕಲ್ ಗ್ರಾಮಗಳ ಕೇಂದವಾಗಿಟ್ಟುಕೊಂಡು ಕುಂದಣ ಅಧಿಕಾರ ನಡೆಸಿದ್ದ ಎಂಬ ಮಾಹಿತಿ ಇದೆ. ಮುಂದೇನಾಯಿತು ಎನ್ನುವ ಬಗ್ಗೆ ಆಗಲಿ, ಪಾಳೆಗಾರವಂಶದ ಬಗ್ಗೆ ಹೆಚ್ಚಿನ ಮಾಹಿತಿ ಸಿಗೋದಿಲ್ಲ. ಕುಂದಣಬೈಲು ಶಂಕರನಾರಾಯಣ ಚಾತ್ರಾ ಎಂಬವರ ಪಟೇಲಿಕೆಗೆ ಒಳಪಟ್ಟಿತ್ತು. ಭೂ ಮಸೂದೆ ಹಿನ್ನೆಲೆಯಲ್ಲಿ ಚಾತ್ರಾ ಭೂಮಿ ಗೇಣಿದಾರರ ಪಾಲಾಯಿತು. ಕುಂದಣಬೈಲಿನಲ್ಲಿ ಅತೀ ಹೆಚ್ಚು ಭೋವಿ ಜನಾಂಗದವರಿದ್ದಾರೆ. ಶ್ರೀ ದುರ್ಗಾಂಬ ಬಸ್ ಸಂಚಾರವಿದೆ.
ಕುಂದಣಬೈಲು ಪೋನ್ ಸಮಸ್ಯೆ ಪರಿಹಾರಕ್ಕಾಗಿ ಬಿಎಸ್‌ಎನ್‌ಎಲ್ ಬಂದಿತ್ತು. ಹೆಚ್ಚಿನ ಮನೆಗಳಿಗೆ ಕ್ವಾಡ್ ಲೆಸ್ ಫೋನ್ ಕೂಡಾ ಬಂತು. ಆದರೆ ಕ್ವಾಡ್ ಲೆಸ್ ಫೋನ್ ಆಂಟಿನಾ ವರ್ಕ್ ಆಗದ ಹಿನ್ನೆಲೆಯಲ್ಲಿ ಫೋನ್ ಮೂಲೆ ಗುಂಪಾಯಿತು. ಈಗಲೂ ಕುಂದಣಬೈಲು ಸರ್ಕಲ್ ಬಳಿಯ ಅಂಗಡಿಯಲ್ಲಿ ಕ್ವಾಡ್ ಲೆಸ್ ಫೋನಿದ್ದು, ಅದರ ಆಂಟಿನಾ ಮರದ ತುದಿಯಲ್ಲಿ ಕೂರಿಸಿಲಾಗಿದೆ. ಆದರೂ ನೆಟ್‌ವರ್ಕ್ ಸಿಕ್ಕರೆ ಪುಣ್ಯ. ಆಗೊಮ್ಮೆ ಈಗೊಮ್ಮೆ ಕ್ವಾಡ್ ಲೆಸ್ ಫೋನ್ ರಿಂಗಣಿಸುತ್ತದೆ.
ಕುಂದಣಬೈಲಿಗೆ ಫೋನ್ ಸಂಪರ್ಕ ಕೊಡಲು ಕಷ್ಟವೇನು ಇಲ್ಲಾ. ಸನಿಹದಲ್ಲಿ ಟಿಸಿ, ಒಎಫ್‌ಸಿ ಕೇಬಲ್ ಎಲ್ಲಾ ಇದ್ದರೂ ಸಂಪರ್ಕಕ್ಕೆ ಏಕೆ ಸತಾಯಿಸುತ್ತಾರೆ ಎನ್ನೋದೇ ತಿಳಿದಿಲ್ಲ. ಹೇಳಿ ಕೇಳಿ ಇದು ಅತೀ ಹೆಚ್ಚು ನಕ್ಸಲ್ ಪ್ರಭಾವಿತ ಪ್ರದೇಶ. ಎಲ್ಲಾದರೂ ನಕ್ಸಲರು ಬಂದರೆ ಮಾಹಿತಿ ಕೊಡೋದು ಹಾಗಿರಲಿ, ಯಾರಿಗಾದರೂ ರಾತ್ರಿ ಹುಷಾರು ತಪ್ಪಿದರೆ ಬಾಡಿಗೆ ವಾಹನ ತರಿಸೋದಕ್ಕೂ ನಾಲ್ಕು ಕಿಮೀ ನಡೆದು ಫೋನ್ ಮಾಡುವ ಸ್ಥಿತಿ ಇದೆ. ಇನ್ನಾದರೂ ಶಾಸಕರು, ಜನಪ್ರತಿನಿಧಿಗಳು ಎಚ್ಚೆತ್ತಕೊಳ್ಳಲಿ ಎನ್ನುವುದೇ ನಮ್ಮ ಆಶಯ.

ಶ್ರೀಕಾಂತ ಹೆಮ್ಮಾಡಿ ವಿ೪ನ್ಯೂಸ್ ೨೪/೭ ಕುಂದಾಪುರ

Related posts

Leave a Reply