Header Ads
Breaking News

ಹಳ್ಳಿ ಜನತೆಯಿಂದ ದೂರವಾದ ಹಲಸು

ಪುತ್ತೂರು: ಈಗ ಹಲಸಿನ ಯುಗ. ಯಾವ ಹಳ್ಳಿ ಅಥವಾ ಪೇಟೆಯ ಮೂಲೆಗೆ ಹೋದರೂ ಹಲಸಿನ ಹಣ್ಣಿನ ಪರಿಮಳ ಮನ ಸೆಳೆಯುತ್ತದೆ. ರಸ್ತೆ ಬದಿಗಳಲ್ಲಿ ಹೋದರೆ ಹಲಸಿನ ಹಣ್ಣು ಮಾರಾಟ ಮಾಡಿ ಬದುಕು ಕಟ್ಟಿಕೊಂಡವರು ಕಾಣಸಿಗುತ್ತಾರೆ. ಆದರೆ ಹಳ್ಳಿ ಮಂದಿ ಮಾತ್ರ ಈ ಹಲಸಿನ ಹಣ್ಣಿನಿಂದ ದೂರವಾಗುತ್ತಿದ್ದಾರೆ.

ಮನೆ ಮಂದಿ ಸುತ್ತ ಕುಳಿತುಕೊಂಡು ಹಲಸು ಕೊಯ್ದು ತಿನ್ನುವ ಸಂಭ್ರಮ ಕಾಲವೊಂದಿತ್ತು. ಹಲಸಿನ ಹಪ್ಪಳ ಮಾಡಿ ಮಳೆಗಾಲದ ದಿನಗಳಲ್ಲಿ ಕರುಂ ಕುರುಂ ಎಂದು ತಿನ್ನುವ ದಿನಗಳಿದ್ದವು. ಹಲಸಿನ ಬೀಜವನ್ನು ಪುಡಿ ಮಾಡಿ ಅದಕ್ಕೆ ಬೆಲ್ಲ ಮತ್ತು ತೆಂಗಿನ ಕಾಯಿ ಹುರಿದು ಚಪ್ಪರಿಸಿಕೊಂಡು ತಿನ್ನುವ ಹಳ್ಳಿಮಂದಿ ಇದ್ದರು. ಹಲಸಿನ ಹಣ್ಣಿನ ಉಂಡುಲ್ಕ ಮಾಡಿ ಊಟದ ರುಚಿ ಹೆಚ್ಚು ಮಾಡುವ ಜನ ಇದ್ದರು. ಆದರೆ ಈಗ ಹಲಸು ಎಂದರೆ ಮಾರು ದೂರ ಹೋಗುವ ಜನತೆ ಹೆಚ್ಚಾಗುತ್ತಿದ್ದಾರೆ. ಹಳ್ಳಿ ಮಂದಿಗೆ ಹಲಸು ಈಗ ಇಷ್ಟವಾಗುತ್ತಿಲ್ಲ. ಹಲಸು ತಿಂದರೂ ಆರೋಗ್ಯ ಏರುಪೇರಾಗುತ್ತದೆ ಎಂಬ ಭಯ ಕಾಡುತ್ತದೆ. ಹಾಗಾಗಿ ಮನೆಯ ಅಕ್ಕಪಕ್ಕದ ಮರಗಳಲ್ಲಿ ಬೆಳೆಯುವ ಹಲಸು ಕೊಳೆತು ಹೋದರೂ ಅತ್ತ ತಲೆ ಹಾಕುವ ಚಿಂತೆಯೂ ಮಾಡುತ್ತಿಲ್ಲ. ಹಳ್ಳಿಯ ಬಹುತೇಕ ಮನೆಗಳಲ್ಲಿ ಹಲಸು ಈಗ ಜಾನುವಾರುಗಳ ಆಹಾರವಾಗಿದೆ.

ಹಲಸು ಹಣ್ಣಾಗುವ ಮೊದಲು ಅದನ್ನು ಕಡಿದು ಪದಾರ್ಥ ಮಾಡುವ ಮನೆ ಮಂದಿ ಈಗ ಗುಜ್ಜೆ ಪದಾರ್ಥ ಮಾಡುವ ಗೋಜಿಗೂ ಹೋಗುತ್ತಿಲ್ಲ. ಅಪರೂಪಕ್ಕೆ ಈ ಪದಾರ್ಥ ಮಾಡಿದರೂ ತಿನ್ನುವ ಮಂದಿ ಇಲ್ಲ. ಊರಿನ ಗುಡ್ಡದ ಮೇಲಿರುವ ಹಲಸಿನ ಮರಗಳಲ್ಲಿ ಗುಜ್ಜೆ ಕಂಡರೆ ಸಾಕು. ಅದನ್ನು ಕಿತ್ತು ತಂದು ಪದಾರ್ಥ ಮಾಡಿ ತಿನ್ನುತ್ತಿದ್ದ ಅಂದಿನ ಹಳ್ಳಿ ಮಂದಿಯೂ ಈಗಿಲ್ಲ.

ಸಾಂಪ್ರದಾಯಿಕ ಆಚರಣೆಗಳು ಜನತೆಯ ಬದುಕಿನಿಂದ ಮಾಯವಾದಂತೆ ಈ ಹಲಸಿನ ವಿವಿಧ ಬಗೆಯ ತಿಂಡಿಗಳು ಹಳ್ಳಿಯಿಂದ ಮಾಯವಾಗಿವೆ. ಹಲಸಿನ ಬೀಜದ ’ಸಾಂತಾನಿ’ ಹಳ್ಳಿಗರ ಮಳೆಗಾಲದ ಪ್ರೀತಿಯ ತಿಂಡಿ. ಇಂದು ಕಾಣಸಿಗುವುದೇ ಇಲ್ಲ. ಹಲಸು ಹಳ್ಳಿಯ ಜನತೆಯಿಂದ ದೂರವಾಗುತ್ತಿರುವಂತೆ ಈಗ ಪೇಟೆ ಪಟ್ಟಣಗಳಲ್ಲಿ ’ಹಲಸು ಹಬ್ಬ’ಗಳು ಕಂಡು ಬರಲಾರಂಭಿಸಿವೆ. ನಿಧಾನಕ್ಕೆ ’ಹಲಸು’ ಹಬ್ಬಕ್ಕೆ ಮಾತ್ರ ಸೀಮಿತವಾಗುತ್ತಿವೆ.
ಪುತ್ತೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಹಿಂದೆ ನೋಂದಣಿ ಕಚೇರಿ ಇದ್ದ ಜಾಗದಲ್ಲಿರುವ ಹಲಸಿನ ಮರವೊಂದು ತನ್ನ ಬುಡದಿಂದಲೇ ಹಲಸಿನ ಕಾಯಿ ಬಿಟ್ಟಿದೆ. ದೂರದಿಂದ ನೋಡಿದರೆ ಮರದಲ್ಲಿ ಹೂವರಿಳಿದಂತೆ ಕಾಣುವ ಈ ಹಲಸು ಬಹುತೇಕ ಕೊಳೆತು ಹೋಗುವುದೇ ಜಾಸ್ತಿ. ಯಾಕೆಂದರೆ ಯಾರಿಗೂ ಈ ಹಣ್ಣು ಬೇಡವಾಗುತ್ತಿದೆ. ಮೈ ತುಂಬಾ ಕಾಯಿ ಬಿಟ್ಟು ನೋಡುಗರನ್ನು ಸೆಳೆಯುವ ಹಲಸಿನ ಮರ ಈಗ ಚಂದ ನೋಡುವುದಕ್ಕೆ ಮಾತ್ರ ಸೀಮಿತವಾಗಿದೆ.

ಹಳ್ಳಿಯ ಪ್ರತಿ ಮನೆಯಲ್ಲಿಯೂ ಒಂದೆರಡು ಹಲಸಿನ ಮರಗಳು ಇದ್ದೇ ಇವೆ. ಇದರಲ್ಲಿ ಹಲಸಿನ ಕಾಯಿ ಬೇಕಾದಷ್ಟು ಬಿಡುತ್ತವೆ. ಆದರೆ ಈಗ ಹಿಂದಿನಂತೆ ಹಲಸಿನ ಹಣ್ಣು ತಿನ್ನುವವರಿಲ್ಲ. ಸಾಮಾನ್ಯವಾಗಿ ಈ ಹಣ್ಣು ಹಾಳಾಗಿ ಹೋಗುವುದೇ ಜಾಸ್ತಿ. ಹಲಸಿನ ಹಣ್ಣಿನ ಹೊಸ ಉತ್ಪನ್ನಗಳು ತಯಾರಾಗಿ ಮಾರುಕಟ್ಟೆಗೆ ಬಂದರೆ ಬಹುಷ; ಹಲಸಿಗೆ ಬೇಡಿಕೆ ಹೆಚ್ಚಾಗಬಹುದು. ಇದನ್ನು ಬೆಳೆಸುವವರ ಸಂಖ್ಯೆಯೂ ಜಾಸ್ತಿಯಾಗಬಹುದು ಹಲಸು ತಜ್ಞರು ಅಭಿಪ್ರಾಯ ಪಡುತ್ತಾರೆ.

Related posts

Leave a Reply

Your email address will not be published. Required fields are marked *