Header Ads
Breaking News

ಹಾಸ್ಟೆಲ್ ಮಕ್ಕಳನ್ನು ಊರಿಗೆ ಕಳುಹಿಸಬೇಡಿ ಪುತ್ತೂರು ಜಿಲ್ಲೆ ಮಕ್ಕಳಿಗೆ ಸುರಕ್ಷಿತ : ಆರೋಗ್ಯ ಇಲಾಖಾ ವತಿಯಿಂದ ನಡೆದ ಸಭೆ

ಪುತ್ತೂರು ಸರ್ಕಾರಿ ವಸತಿ ನಿಲಯಗಳಲ್ಲಿರುವ ರಾಜ್ಯದ ಬೇರೆ ಜಿಲ್ಲೆಗಳ 10ನೇ ತರಗತಿ ಹಾಗೂ ಪಿಯುಸಿ ಮಕ್ಕಳನ್ನು ಯಾವುದೇ ಕಾರಣದಿಂದ ಅವರ ಊರಿಗೆ ಕಳುಹಿಸುವುದು ಬೇಡ ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಕಟ್ಟುನಿಟ್ಟಿನ ಸೂಚನೆಯನ್ನು ಇಲಾಖಾಧಿಕಾರಿಗೆ ನೀಡಿದರು.

ಪುತ್ತೂರು ಮಿನಿವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖಾ ವತಿಯಿಂದ ಆಯೋಜಿಸಲ್ಪಟ್ಟ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
10ನೇ ತರಗತಿ ಮತ್ತು ಪಿಯುಸಿ ತರಗತಿಗಳ ಪರೀಕ್ಷೆ ಇನ್ನಷ್ಟೇ ನಡೆಯಬೇಕಾಗಿದೆ. ಉತ್ತರ ಕರ್ನಾಟಕ ಭಾಗದ ಹೆಚ್ಚು ಮಕ್ಕಳು ವಸತಿ ನಿಲಯಗಳಲ್ಲಿದ್ದಾರೆ. ಅವರ ಪಾಲಕರು ಮಕ್ಕಳನ್ನು ಕರೆದೊಯ್ಯಲು ಒತ್ತಡ ತರುತ್ತಿದ್ದಾರೆ ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಉಪವಿಭಾಗಾಧಿಕಾರಿ ಅವರು ಯಾವುದೇ ಕಾರಣಕ್ಕೂ ಈ ಮಕ್ಕಳನ್ನು ಕಳುಹಿಸುವುದು ಬೇಡ. ಪರೀಕ್ಷೆ ಮುಗಿಯುವ ತನಕ ಅವರು ಇರಲಿ. ಉತ್ತರ ಕರ್ನಾಟಕ ಭಾಗಕ್ಕಿಂತ ದಕ್ಷಿಣಕನ್ನಡ ಜಿಲ್ಲೆಯೇ ಅವರಿಗೆ ಹೆಚ್ಚು ಸುರಕ್ಷಿತ ಎಂದು ಅವರು ತಿಳಿಸಿದರು.

ಅಧಿಕಾರಿಗಳು ಕೊರೊನಾ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ. ಸದಾ ಜಾಗೃತರಾಗಿರಿ. ಸತ್ಯ ವಿಚಾರಗಳನ್ನು ಹುಡುಕಿ. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಸಮಸ್ಯೆಯನ್ನು ಎದುರಿಸೋಣ ಎಂದು ಅಧಿಕಾರಿ ವರ್ಗಕ್ಕೆ ಧೈರ್ಯ ತುಂಬಿದರು. ಪ್ರತಿ ಇಲಾಖಾ ಕಚೇರಿಯಲ್ಲಿಯೂ ವೈಯುಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.ಪುತ್ತೂರು ಭಾಗದಲ್ಲಿರುವ ಕಟ್ಟಡ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ಅವರು ಆದಷ್ಟೂ ಸ್ಥಳೀಯವಾಗಿ ಕೆಲಸ ಮಾಡಲು ಅವರ ಮನವೊಲಿಸಿ. ದೂರದ ಭಾಗಗಳಲ್ಲಿರುವ ಕೆಲಸಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಅವರಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಅವರು ಕೊರೊನಾ ವಿಚಾರವಾಗಿ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ಯಾವುದೇ ಮಾಹಿತಿ ದೊರೆತರೂ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಗೊಂದಲ ನಿರ್ಮಾಣವಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ಅಧಿಕಾರಿಗಳಾದ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಕಡಬ ತಹಶೀಲ್ದಾರ್ ಜಾನ್‍ಪ್ರಕಾಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ. ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಆಶಾ ಪುತ್ತೂರಾಯ, ಸಿಡಿಪಿಒ ಶ್ರೀಲತಾ, ಡಾ,ಪ್ರದೀಪ್, ಶಾಲಾ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ನಗರಸಭಾ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಮತ್ತಿತರರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *