Header Ads
Header Ads
Breaking News

ಹೊಂಡ ಗುಂಡಿಗಳಿಂದ ಹದಗೆಟ್ಟ ಕಬಕ-ಸುರತ್ಕಲ್ ಅಂತಾರಾಜ್ಯ ಹೆದ್ದಾರಿ : ಪ್ರತಿಭಟನೆಗೆ ಮುಂದಾದ ವಾಹನ ಚಾಲಕರು

ವಿಟ್ಲ: ಕಬಕ-ಸುರತ್ಕಲ್ ಅಂತಾರಾಜ್ಯ ಹೆದ್ದಾರಿಯ ಕಬಕದಿಂದ ವಿಟ್ಲ ವರೆಗಿನ ರಸ್ತೆ ಸಂಪೂರ್ಣವಾಗಿ ಹೊಂಡಗಳಿಂದ ಕೂಡಿ ಹದಗೆಟ್ಟು ಹೋಗಿದೆ. ಹೊಂಡದಲ್ಲಿ ರಸ್ತೆಯನ್ನೇ ಹುಡುಕುವ ಪರಿಸ್ಥಿತಿಯಿದೆ. ಇಂದು ಸರಿಯಾಗುತ್ತೇ ನಾಳೆ ಸರಿಯಾಗುತ್ತೆ ಅಂದುಕೊಂಡವರಿಗೆ ನಿರಾಸೆಯಾಗುತ್ತಲೇ ಇದೆ. ಇದೀಗ ಸಾರ್ವಜನಿಕರು ಹಾಗೂ ವಾಹನ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಸಾಲೆತ್ತೂರು-ವಿಟ್ಲ ಪೇಟೆ ಮೂಲಕ ಕಬಕವನ್ನು ಸೇರುವ ರಸ್ತೆ ಹೊಂಡಮಯವಾಗಿದೆ. ವಿಟ್ಲದಿಂದ ಕಬಕ ವರೆಗೆ ಸಂಪೂರ್ಣವಾಗಿ ಹೊಂಡಗಳಿಂದ ಕೂಡಿದೆ. ಚರಂಡಿಗಳು ಮುಚ್ಚಿ ಹೋಗಿದೆ. ರಸ್ತೆಯೇ ಮಾಯವಾಗಿದೆ. ಹೊಂಡಗಳೇ ಕಾಣುತ್ತಿದೆ. 7-8 ನಿಮಿಷದಲ್ಲಿ ತಲುಪುವ ರಸ್ತೆಯಲ್ಲಿ ಅರ್ಧ ಗಂಟೆ ಕಾಲ ನರಳಾಡುತ್ತ, ಉರುಳಾಡುತ್ತ ಸಂಚರಿಸಬೇಕಾಗಿದೆ. ಹೊಂಡಗಳ ಅಟ್ಟಾಹಾಸಕ್ಕೆ ಪ್ರತಿನಿತ್ಯ ವಾಹನಗಳು ರಸ್ತೆ ಮಧ್ಯೆದಲ್ಲಿ ಕೆಟ್ಟು ನಿಲ್ಲುತ್ತಿದೆ. ಕಂಬಳಬೆಟ್ಟು ಎಂಬಲ್ಲಿ ರಸ್ತೆಯಲ್ಲೇ ನೀರು ಸಾಗಿ, ರಸ್ತೆಯ ಅಗಲ ನಾಲ್ಕು ಮೀಟಿರಿಗಿಳಿದಿದೆ. ಅಳಕೆಮಜಲಿನಲ್ಲಿ ವಾಹನಗಳು ಹಾರಾಡುತ್ತವೆ. ಕಬಕದಲ್ಲಿ ಕುಣಿದಾಡುತ್ತವೆ. ಇಡ್ಕಿದು ಗ್ರಾಮದಲ್ಲಿ ನಲಿದಾಡುತ್ತವೆ. ವಾಹನಗಳಲ್ಲಿರುವ ಪ್ರಯಾಣಿಕರ ತಲೆ ವಾಹನಗಳಿಗೆ ತಾಟಿ, ಊದಿಕೊಳ್ಳುತ್ತವೆ.

ಈ ಹಿಂದೆ ಪೊಳಲಿ ಕೈಕಂಬದಿಂದ ಕಬಕ ವರೆಗೆ ರಸ್ತೆಯ ಅಗಲ 5.50 ಮೀಟರ್ ಇತ್ತು. ಅದನ್ನು 7 ಮೀಟರ್ ಅಗಲ ಮಾಡಲು ಇಲಾಖೆ ಕ್ರಮಕೈಗೊಂಡಿತ್ತು. 18 ಕೋಟಿ ರೂ. ಅನುದಾನ ಮಂಜೂರಾಯಿತು. ಗುತ್ತಿಗೆದಾರರು ಕಾಮಗಾರಿಯನ್ನು ಅಲ್ಲಲ್ಲಿ ಆರಂಭಿಸಿದ್ದರು. ಮಳೆಗಾಲ ಸಮೀಪಿಸುತ್ತಿದ್ದಂತೆ ವಿಟ್ಲ ಕಬಕ ರಸ್ತೆಯನ್ನು ವಿಸ್ತರಿಸುವ ಕಾಮಗಾರಿ ಆರಂಭವಾಯಿತು. 1.50 ಮೀಟರ್ ಅಗಲ ಮಾಡುವುದಕ್ಕೆ ಹೊಂಡ ತೋಡಲಾಯಿತು. ಆ ಹೊಂಡದಲ್ಲಿ ನೀರು ತುಂಬಿ, ಅಪಾಯಕಾರಿ ಸನ್ನಿವೇಶ ಉಂಟಾಯಿತು. ಕೊನೆಗೂ ಅರ್ಧಂಬರ್ಧ ಕಾಮಗಾರಿ ನಡೆಯಿತು. ಆಗ ಗುತ್ತಿಗೆದಾರರು ನಾಪತ್ತೆಯಾದರೆಂದು ಕಾಮಗಾರಿ ಸ್ಥಗಿತಗೊಂಡಿತು. ಎಲ್ಲವೂ ಸರಿಯಾಗಿದ್ದರೆ ವಿಟ್ಲ ಕಬಕ ರಸ್ತೆಯು 7 ಮೀಟರ್ ಆಗಲವಾಗುತ್ತಿತ್ತು. ಮತ್ತು ವಿಸ್ತರಣೆಗೊಂಡ 1.50 ಮೀಟರ್ ರಸ್ತೆಗೆ ಡಾಮರು ಹಾಕಲಾಗುತ್ತಿತ್ತು. ಯಾವುದೂ ಪೂರ್ತಿಯಾಗದೇ ಈ ರಸ್ತೆ ಹದಗೆಡುತ್ತಲೇ ಹೋಯಿತು.

ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಸಾರ್ವಜನಿಕರು ಅಧಿಕಾರಿಗಳಿಗೆ ಒತ್ತಡ ಹಾಕಿ, ಕಾಮಗಾರಿ ಪೂರೈಸಬೇಕೆಂದರು. ಆದುದರಿಂದ ಗುತ್ತಿಗೆಯನ್ನು ರದ್ದುಪಡಿಸಲಾಯಿತು. ಹೊಸ ಟೆಂಡರ್ ಪ್ರಕ್ರಿಯೆಯೂ ನಡೆಯಿತು. ಗುತ್ತಿಗೆದಾರರು ಮುಂದೆ ಬರಲಿಲ್ಲ. ಅಂತೂ ಈ ಭಾಗದ ನಾಗರಿಕರಿಗೆ ಉತ್ತಮ ರಸ್ತೆಯಲ್ಲಿ ಸಂಚರಿಸುವ ಭಾಗ್ಯ ಬರಲೇ ಇಲ್ಲ.
ಇಲ್ಲಿನ ನಿತ್ಯ ಸಂಚಾರಿಗಳು ಮತ್ತು ಫಲಾನುಭವಿಗಳ ಸಂಖ್ಯೆ ನಿರ್ದಿಷ್ಟವಾಗಿ ಹೇಳಲಾಗದು. ನಿತ್ಯವೂ 30ಕ್ಕೂ ಅಧಿಕ ಬಸ್ ಸಂಚಾರ, ಟೂರಿಸ್ಟ್ ಕಾರು, ರಿಕ್ಷಾ, ಖಾಸಗಿ ವಾಹನಗಳ ಸಂಖ್ಯೆ ಅಪಾರ. ಅಳಿಕೆ, ಕನ್ಯಾನ, ಕರೋಪಾಡಿ, ಕೇಪು, ಪೆರುವಾಯಿ, ಮಾಣಿಲ, ವಿಟ್ಲಮುಡ್ನೂರು, ಕುಳ, ಇಡ್ಕಿದು, ವಿಟ್ಲ ಗ್ರಾಮಗಳ ಜನತೆ ಪುತ್ತೂರಿಗೆ ಈ ರಸ್ತೆಯಲ್ಲೇ ಸಾಗಬೇಕು. ಕೇರಳದಿಂದ ವಿಟ್ಲ ಪುತ್ತೂರು ಸಾಗುವುದಕ್ಕೇ ಇದೇ ಮುಖ್ಯ ರಸ್ತೆ. ಕೇರಳ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರವೂ ಇದೇ ಮಾರ್ಗದಲ್ಲಿ. ಸಾವಿರಾರು ವಿದ್ಯಾರ್ಥಿಗಳೂ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.
ಈ ಪ್ರಮುಖ ರಸ್ತೆಯ ಅವಗಣನೆಯನ್ನು ಖಂಡಿಸುತ್ತೇವೆ. ಇನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಈ ರಸ್ತೆಗೆ ಸುಮಾರು 3 ಕೋಟಿ ರೂ.ಗಳ ಅನುದಾನ ಬೇಕು. ತತ್‌ಕ್ಷಣ ಈ ರಸ್ತೆಗೆ ಅನುದಾನ ಬಿಡುಗಡೆ ಮಾಡಬೇಕು. ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿಸಬೇಕು. ಈ ಕೂಗು ಕೇಳದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ. ರಸ್ತೆಯನ್ನೇ ಬಂದ್ ಮಾಡುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *