Header Ads
Breaking News

ಹೊಸ ಛಾಪಿನೊಂದಿಗೆ ಕಂಗೊಳಿಸುತ್ತಿದೆ ಮಂಜೇಶ್ವರದ ಗೋವಿಂದ ಪೈ ಗಿಳಿವಿಂಡು ಜ್ಞಾನದೇಗುಲ

ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಳೆದ ಎರಡು ವರ್ಷಗಳಿಂದ ಹೊಸ ಛಾಪಿನೊಂದಿಗೆ ಕಂಗೊಳಿಸುತ್ತಿದೆ. ಗಿಳಿವಿಂಡು ಎಂದು ಕರೆಯಲ್ಪಡುವ ಸಮುಚ್ಚಯದಲ್ಲಿ ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈಯವರ ಪುನರ್ ನಿರ್ಮಾಣಗೊಂಡ ನಿವಾಸ, ಅದರೊಳಗಿರುವ ಯಕ್ಷಗಾನ ಮ್ಯೂಸಿಯಂ, ಪಾರ್ತಿಸುಬ್ಬ ವೇದಿಕೆ, ಸುಸಜ್ಜಿತ ಗ್ರಂಥಾಲಯವು ವಿಶ್ವ ಮಟ್ಟದಲ್ಲಿ ಗೌರವಿಸಲ್ಪಡುವ ಸಾಹಿತ್ಯ ಮತ್ತು ಸಂಸ್ಕøತಿಗೆ ಹಿಡಿದ ಕೈಗನ್ನಡಿಯಾಗಿದೆ. ಹಲವು ವರ್ಷಗಳಿಂದ ಮೂಲೆಗುಂಪಾಗಿದ್ದ ಸ್ಮಾರಕವು ಕರ್ನಾಟಕ ಮತ್ತು ಕೇರಳ ರಾಜ್ಯ ಸರಕಾರಗಳ ಜಂಟಿ ಆಶ್ರಯದಲ್ಲಿ ಪುನರ್ ನವೀಕರಣಗೊಂಡು ಕಂಗೊಳಿಸುತ್ತಿದೆ.

ಗಿಳಿವಿಂಡು ಸಮುಚ್ಚಯವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಸಂಸ್ಕøತಿ ಸಾಹಿತ್ಯದ ದ್ಯೋತಕವಾಗಿ ನಾಡಿಗೆ ಸಮರ್ಪಣೆಗೊಂಡಿತ್ತು.

ಮೇರು ವ್ಯಕ್ತಿತ್ವದ ಘಣಿಯಾದ ಮಂಜೇಶ್ವರ ಪೈಯವರ ತವರು ನೆಲಕ್ಕೆ ಇದೀಗ ಯಾವುದೇ ಸ್ಪರ್ಶ ಇಲ್ಲದಂತಾಗಿದೆ . ಹಲವು ವರ್ಷಗಳ ಕಾಲ ಸಾಹಿತ್ಯದ ಸೌಧವನ್ನು ಕಟ್ಟಿದ ಮಂಜೇಶ್ವರದ ಭೂಮಿಗೆ ಸಂದರ್ಶಕರ ಕೊರತೆ ಇದೆ. ಧನಾತ್ಮಕ ಮತ್ತು ಕ್ರಿಯಾಶೀಲ ಕಾರ್ಯಕ್ರಮ ಯೋಜನೆಗಳ ಮೂಲಕ ಗಿಳಿವಿಂಡುವಿಗೆ ಕೇರಳ, ಕರ್ನಾಟಕ ಸಹಿತ ವಿವಿಧ ರಾಜ್ಯಗಳ ಸಾಹಿತ್ಯಾಸಕ್ತರನ್ನು ಆಕರ್ಷಿಸುವಂತೆ ಮಾಡಲು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಪ್ರಯತ್ನಶೀಲವಾಗಬೇಕಾಗಿದೆ. ರಾಜ್ಯದ ಪ್ರವಾಸಿ ನಕ್ಷೆಯಲ್ಲಿ ಸ್ಥಾನ ನೀಡಿ ಹೆಚ್ಚಿನ ಸಂಖ್ಯೆಯ ಜನಮಂದಿ ಪೈಗಳ ಸಾಹಿತ್ಯದ ಮೂಲಕ ಹೊಸ ಪ್ರೇರಣೆ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಕವಿ ಕೋವಿದನ ಬದುಕಿನ ಚಿತ್ರಣವನ್ನು ನೀಡಬಲ್ಲ ಮಾಹಿತಿ ಕಣಜ, ಸಾಕ್ಷ್ಯಚಿತ್ರ ನಿರ್ಮಾಣ , ವೆಬ್‍ಸೈಟ್ ಮೂಲಕ ಗಿಳಿವಿಂಡು ವಿಶೇಷತೆಗಳ ಬಗ್ಗೆ ಸವಿಸ್ತರ ಮಾಹಿತಿ, ಮುಂಗಡ ಬುಕಿಂಗ್ ವ್ಯವಸ್ಥೆ, ಸಾಹಿತಿ ಮತ್ತು ಯಾತ್ರಿಕರಿಗೆ ತಂಗಲು ಬೇಕಿರುವ ವ್ಯವಸ್ಥೆಗಳು ಕಲ್ಪಿಸುವಂತೆ ಸಂಬಂಧಪಟ್ಟವರು ಶ್ರಮಿಸಬೇಕಾಗಿದೆ.

ರಜಾದಿನಗಳಲ್ಲಿ ಅಂತಾರಾಜ್ಯ ಸಾಹಿತ್ಯಾಸಕ್ತ ಮಕ್ಕಳಿಗೆ ಅಗತ್ಯವಾದ ಸಾಹಿತಿಕ ಶಿಬಿರಗಳು, ಮಕ್ಕಳ ಕಥಾ ಕಮ್ಮಟಗಳನ್ನು ಈ ಕೇಂದ್ರದಲ್ಲಿ ಹಮ್ಮಿಕೊಂಡರೆ ಸಣ್ಣ ಮಟ್ಟದಲ್ಲಾದರೂ ಪ್ರಚಾರ ಗಿಟ್ಟಿಸಿ ಗಿಳಿವಿಂಡು ನ ಪ್ರಾಧಾನ್ಯತೆಯನ್ನು ಹೆಚ್ಚಿಸಬಹುದಾಗಿದೆ. ಪ್ರಸ್ತುತ ಗಿಳಿವಿಂಡು ಸಮುಚ್ಚಯಕ್ಕೆ ಹೆಚ್ಚಿನ ಜನರನ್ನು ಆಕರ್ಷಿಸುವ ಕಾರ್ಯವಾಗಬೇಕು. ಯುವ ಸಮೂಹಕ್ಕೆ ರಾಷ್ಟ್ರಕವಿ ಪ್ರೇರಣೆಯಾಗಬೇಕು. ಸಮುಚ್ಚಯಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಕವಿಕೋವಿದ ಮಂಜೇಶ್ವರ ಗೋವಿಂದ ಪೈಗಳ ಸಾಹಿತಿಕ ಬದುಕಿನ ಬಗ್ಗೆ ಮಾಹಿತಿ ನೀಡುವ ಕಿರುಹೊತ್ತಗೆ ಸಹಿತ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮಗಳು, ಇಲ್ಲಿನ ವಿಶೇಷತೆಗಳನ್ನು ಸೂಚಿಸುವ ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷಾ ಬ್ರೋಚರ್ಗಳ ಅಗತ್ಯವೂ ಇದೆ. ಮಂಜೇಶ್ವರ ರಾ.ಹೆಯ ಎರಡೂ ಬದಿಗಳಲ್ಲಿ ಸ್ಮಾರಕದ ಇರುವಿಕೆಯನ್ನು ಸೂಚಿಸುವ ಆಕರ್ಷಕ ನಾಮಫಲಕದ ಅನಿವಾರ್ಯತೆಯಿದೆ. ಗಿಳಿವಿಂಡು ಸಮುಚ್ಚಯದ ಬಗ್ಗೆ ಕೂಲಂಕಶ ಮಾಹಿತಿಯನ್ನೊಳಗೊಂಡ ವೆಬ್‍ಸೈಟ್ ಸಹಿತ ಪೈಗಳ ಬದುಕಿನ ಬಗ್ಗೆಗಿನ ಸಾಕ್ಷ್ಯಚಿತ್ರ ನಿರ್ಮಿಸಿದಲ್ಲಿ ಹೆಚ್ಚಿನ ಜನರನ್ನು ತಲುಪುವ ಕಾರ್ಯವಾಗಬಹುದಾಗಿದೆ.

Related posts

Leave a Reply

Your email address will not be published. Required fields are marked *