Header Ads
Header Ads
Breaking News

ಸುಳ್ಯ: ನ.ಪಂ ತ್ಯಾಜ್ಯವನ್ನು ತೋಟಕ್ಕೆ ತರಿಸಿ ಗೊಬ್ಬರ ಮಾಡುತ್ತಿರುವ ಪ್ರಗತಿಪರ ಕೃಷಿಕ

ಸುಳ್ಯ ನಗರಾಡಳಿತಕ್ಕೆ ನಗರದಲ್ಲಿ ಸಂಗ್ರಹವಾದ ಕಸವನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವಿನ ವಿಷಯ. ಈ ಕಸವನ್ನು ಏನು ಮಾಡಬೇಕೆಂದೇ ತಿಳಿಯದ ಸ್ಥಿತಿ ಇಂತಹ ಸಂದರ್ಭದಲ್ಲಿ ಕಸವನ್ನು ಬಳಸಿ ಗೊಬ್ಬರವನ್ನು ತಯಾರಿಸಿ ಗಮನ ಸೆಳೆಯುತ್ತಿದ್ದಾರೆ ಸುಳ್ಯದ ಪ್ರಗತಿಪರ ಕೃಷಿಕ ವಿನೋದ್ ಲಸ್ರಾದೋ.ಸುಳ್ಯ ಜಯನಗರದ ವಿನೋದ್ ಲಸ್ರಾದೋ ಪ್ರಗತಿಪರ ಕೃಷಿಕ. ಸುಳ್ಯ ನಗರದ ಕಸವನ್ನು ಡಂಪ್ ಮಾಡುತ್ತಿದ್ದ ಕಲ್ಚರ್ಪೆಯ ತ್ಯಾಜ್ಯ ವಿಲೇವಾರಿ ಘಟಕ ತುಂಬಿ ತುಳುಕಿದ ಕಾರಣ. ನಗರದ ಕಸ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಸುಳ್ಯ ನಗರ ಪಂಚಾಯತ್‌ಗೆ ದೊಡ್ಡ ಸವಾಲಿನ ವಿಷಯ ಆಗಿತ್ತು. ಕಸ ಸಾಗಾಟಕ್ಕೆಂದು ಪ್ರತಿ ತಿಂಗಳು ಲಕ್ಷಾಂತರ ರೂಗಳನ್ನು ಖರ್ಚು ಮಾಡಬೇಕಾಗುವ ಪರಿಸ್ಥಿತಿ ನಗರ ಪಂಚಾಯತ್‌ಗೆ ಒದಗಿ ಬಂತ್ತು. ಈ ಸಂದರ್ಭದಲ್ಲಿ ನಗರ ಪಂಚಾಯತಿಯ ಕಸವನ್ನು ಪಡೆದು ತನ್ನದೇ ತೋಟದಲ್ಲಿ ಗೊಬ್ಬರ ತಯಾರು ಮಾಡಿ ತೋಟಕ್ಕೆ ಬಳಕೆ ಮಾಡಿ ಸಾಧನೆ ಮಾಡಿದ್ದು ವಿನೋದ್ ಲಸ್ರಾದೋ.

ನಗರ ಪಂಚಾಯತ್ ಮನೆ ಮನೆಗಳಿಂದ ಮತ್ತು ನಗರದಿಂದ ಸಂಗ್ರಹಿಸುವ ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ವಿಂಗಡನೆ ಮಾಡಲಾಗುತ್ತಿದೆ. ಬೇರ್ಪಡಿಸಿದ ಹಸಿ ಕಸವನ್ನು ವಿನೋದ್ ಲಸ್ರಾದೋ ಅವರ ತೋಟಕ್ಕೆ ಕೊಂಡೊಯ್ದು ಏರೋಲಿಕ್ ಕಂಪೋಸ್ಟಿಂಗ್ ವಿಧಾನದ ಮೂಲಕ ಕಸವನ್ನು ಗೊಬ್ಬರವಾಗಿ ಮಾರ್ಪಡಿಸುತ್ತಾರೆ.

ವಿನೋದ್ ಅವರು ತನ್ನ ತೋಟದಲ್ಲಿ ಅಡಿಕೆ ಮತ್ತು ಬಿದಿರನ್ನು ಬಳಸಿ ಗಾಳಿ ಮತ್ತ ತೇವಾಂಶ ಹರಿದಾಡುವಂತೆ ನಿರ್ಮಿಸಿದ ತೊಟ್ಟಿಯಲ್ಲಿ ಈ ಕಸವನ್ನು ಹರಡಲಾಗುತ್ತದೆ. ಅದರ ಮೇಲೆ ಬೆಲ್ಲ ಮತ್ತು ವೇಸ್ಟ್ ಡಿ ಕಂಪೋಸರ್ ಸೇರಿಸಿದ 100 ಲೀಟರ್ ಮಿಶ್ರಣವನ್ನು ಸಿಂಪಡಿಸಲಾಗುತ್ತದೆ. ಕಸವನ್ನು ಹುಡಿ ಮಾಡಿ ಗೊಬ್ಬರವಾಗಿ ಪರಿವರ್ತಿಸಲು ಈ ಡಿ ಕಂಪೋಸರ್ ದ್ರಾವಣ ಸಹಾಯಕವಾಗುತ್ತದೆ. ಕೊಳೆತ ಕಸದಿಂದ ವಾಸನೆ, ನೊಣ, ಸೊಳ್ಳೆಗಳು ಬಾರದಂತೆ ಇಎಂ-1 ಎಂಬ ದ್ರಾವಣವನ್ನು ಇದರ ಮೇಲೆ ಸಿಂಪಡಿಸಲಾಗುತ್ತದೆ. ಅದರ ಮೇಲೆ ಒಣಗಿದ ತರಗೆಲೆಗಳನ್ನು ಹಾಕಲಾಗುತ್ತದೆ. ಪ್ರತಿ ದಿನ ಹೀಗೆ ಹಾಕಿದ ಕಸವು ಎರಡು ತಿಂಗಳಲ್ಲಿ ಉತೃಷ್ಟ ಗೊಬ್ಬರವಾಗಿ ಪರಿವರ್ತನೆಯಾಗುತ್ತಿದೆ. ಕಸಕ್ಕೆ ಸೆಗಣಿ ಬೆರೆಸಿದರೆ 40 ದಿನದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ ದೊರೆಯಲು ಸಾಧ್ಯವಾಗುತ್ತದೆ. ಪ್ರತಿ ನಿತ್ಯ ಒಂದು ಟನ್ ಕಸ ಬಂದು ಇವರು ತೋಟದಲ್ಲಿ ರಚನೆ ಮಾಡಿದ ತೊಟ್ಟಿ ಸೇರುತ್ತದೆ. ಒಂದು ತೊಟ್ಟಿ ತುಂಬಲು ಒಂದು ತಿಂಗಳ ಕಸ ಬೇಕಾಗುತ್ತದೆ.ತ್ಯಾಜ್ಯವನ್ನು ಬಳಸಿ ಅತೀ ಕಡಿಮೆ ದರದಲ್ಲಿ ಗೊಬ್ಬರ ತಯಾರಿಸಬಹುದು. ಪ್ರತಿ ದಿನ ಸುಮಾರು ಒಂದು ಟನ್ ಕಸದಲ್ಲಿ ಶೇ. 60 ರಷ್ಟು ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಒಂದು ಟನ್ ಕಸದಲ್ಲಿ ಕಡಿಮೆ ಎಂದರೂ ಆರು ಕ್ವಿಂಟಾಲ್ ಗೊಬ್ಬರ ಶೇಖರಣೆ ಆಗುತ್ತದೆ. ಡಿ ಕಂಪೋಸರ್, ಇಎಂ-1 ದ್ರಾವಣ, ಕೆಲಸದವರ ಸಂಬಳ ಸೇರಿ ಪ್ರತಿ ದಿನ ಸುಮಾರು 1200 ರೂ ನಷ್ಟು ಖರ್ಚು ತಗಲುತ್ತದೆ. ಅಲ್ಲದೇ ವಿನೋದ್ ಅವರು ಯೂಟ್ಯೂಬ್, ಗೂಗಲ್‌ನಲ್ಲಿ ಮಾಹಿತಿ ಪಡೆದು ಗಾಝಿಯಾಬಾದ್‌ನಿಂದ ಡಿ ಕಂಪೋಸರ್ ಮತ್ತು ಕೇರಳದಿಂದ ಇಎಂ-1 ವಿಶ್ರಣಗಳನ್ನು ತರಿಸಿ ಇವರು ಕಸದಿಂದ ಗೊಬ್ಬರ ತಯಾರಿಸುವ ಪ್ರಯೋಗವನ್ನು ಮಾಡುತ್ತಿದ್ದಾರೆ. ಘನತ್ಯಾಜ್ಯ ಕಸದಿಂದ ಗೊಬ್ಬರ ತಯಾರಿಸುವ ಕುರಿತು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸನತ್, ವಿಘ್ನೇಶ್, ರಮ್ಯ ಮತ್ತು ಸಿಂಚನ ಅವರ ತಂಡ ವಿನೋದ್ ಲಸ್ರಾದೋ ಅವರ ತೋಟದಲ್ಲಿ ಪ್ರಯೋಗ ಆರಂಭಿಸಿದ್ದಾರೆ.

ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಕಸದಿಂದ ಗೊಬ್ಬರ ಪಡೆಯುವ ಪ್ರಯೋಗ ಯಶಸ್ವಿಯಾಗುತ್ತಿರುವುದರಿಂದ ಸುಳ್ಯ ನಗರ ಪಂಚಾಯತ್ ನಿಟ್ಟುಸಿರು ಬಿಡತೊಡಗಿದೆ. ಆದರೆ ಈ ಪ್ರಯೋಗ ಒಬ್ಬ ಕೃಷಿಕನ ತೋಟದಲ್ಲಿ ನಡೆದರೆ ಸಾಲದು, ನಗರ ವ್ಯಾಪ್ತಿಯ ಕನಿಷ್ಠ 5-10 ಮಂದಿ ರ್ಕರಷಿಕರ ತೋಟದಲ್ಲಿ ಈ ಪ್ರಯೋಗ ಮಾಡತೊಡಗಿದರೆ ಕೃಷಿಕರಿಗೂ ಅನುಕೂಲ, ನಗರಾಡಳಿತಕ್ಕೂ ಅನುಕೂಲ.

ಈ ಪ್ರಯೋಗದ ಬಗ್ಗೆ ಪ್ರಗತಿಪರ ಕೃಷಿಕ ವಿನೋದ್ ಲಸ್ರಾದೋ ಪ್ರತಿಕ್ರೀಯೆ ನೀಡಿ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಬಳಸಿ ಅತೀ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರವನ್ನು ತಯಾರಿಸಬಹುದು. ವ್ಯವಸ್ಥಿತವಾಗಿ ಮಾಡಿದರೆ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತನೆ ಮಾಡಿ ಉತ್ತಮ ಗೊಬ್ಬರವನ್ನು ತಯಾರಿಸಿ ಕೃಷಿಗೆ ಬಳಕೆ ಮಾಡಬಹುದು. ಸ್ಥಳೀಯಾಡಳಿತ ಸರಿಯಾದ ಸಹಕಾರ, ಸಹಾಯ ನೀಡಿದರೆ ಯಂತ್ರೋಪಕರಣಗಳನ್ನು ಬಳಸಿ ಗೊಬ್ಬರವನ್ನು ಮಾಡಿ ಕೃಷಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಬಳಸಬಹುದು. ನಗರ ಪಂಚಾಯತ್ ಕಸವನ್ನು ಪುಡಿ ಮಾಡುವ ಯಂತ್ರವನ್ನು ನನಗೆ ಒದಗಿಸಿದರೆ ಅಥವಾ ಅವರೇ ಅಳವಡಿಸಿ ನನಗೆ ಕಸ ಪುಡಿ ಮಾಡಿಕೊಟ್ಟರೆ ಇನ್ನಷ್ಟು ಪರಿಣಾಮಕಾರಿಯಾಗಿ ಗೊಬ್ಬರ ತಯಾರಿಸಿ ಕೊಡುತ್ತೇನೆ. ಇದರಿಂದ ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಪರಿಹಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಗನ ಪ್ರಯೋಗಕ್ಕೆ ತಂದೆ ವಿಲಿಯಂ ಲಸ್ರಾದೋ ಪ್ರತಿಕ್ರಿಯೆ ನೀಡಿ ನಗರದ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಬಳಕೆ ಮಾಡುವ ಕುರಿತು ತಜ್ಞರ ಜೊತೆ ಚರ್ಚೆ ನಡೆಸಿ ಪ್ರಯೋಗ ಮಾಡುತ್ತಿದ್ದೇವೆ. ನಗರ ಪಂಚಾಯತ್‌ನಲ್ಲಿ ಒಂದು ವರ್ಷದ ವರೆಗೆ ತ್ಯಾಜ್ಯವನ್ನು ತಂದು ಹಾಕುವುದಾಗಿ ಒಪ್ಪಿಕೊಂಡು ಸಹಕಾರ ನೀಡುತ್ತಿದ್ದಾರೆ. ದಿನಕ್ಕೆ ಸುಮಾರು 1000ದ ವರೆಗೆ ಖರ್ಚು ತಗುಲುತ್ತದೆ. ಸ್ಥಳಿಯಾಡಳಿತಗಳು ಇದರಲ್ಲಿ ಕೈಜೋಡಿಸಿದರೆ ನಗರದ ಸೌಂದರ್ಯ ಹೆಚ್ಚಿಸಬಹುದು.

ಕಸದಿಂದ ಗೊಬ್ಬರ ತಯಾರಿಸುವ ಬಗ್ಗೆ ಪ್ರಯೋಗ ಕೈಗೊಂಡಿರುವ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸನತ್ ಪ್ರತಿಕ್ರಿಯೆ ನೀಡಿ ಕಸರಿಂದ ಗೊಬ್ಬರ ತಯಾರಿಸುವ ಬಗ್ಗೆ ನಾವು ನಾಲ್ಕು ಜನ ಸೇರಿ ಪ್ರಾಜೇಕ್ಟ್ ನಡೆಸುತ್ತಿದ್ದೇವೆ. ಸಾಲಿಡ್ ವೇಸ್ಟ್ ಮ್ಯಾನೆಂಜ್‌ಮೆಂಟ್‌ನಲ್ಲಿ ನಗರದಲ್ಲಿ ಸಂಗ್ರಹವಾದ ಹಸಿ ಕಸವನ್ನು ಯಾವ ರೀತಿ ಪರಿವರ್ತನೆ ಮಾಡಬಹುದು ಎನ್ನುದನ್ನು ಪ್ರಯೋಗ ಮಾಡುತ್ತಿದ್ದೇವೆ.

Related posts

Leave a Reply