Header Ads
Breaking News

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ : ರಸ್ತೆ ಸುರಕ್ಷತಾ ನಿಯಮಗಳ ಕರಪತ್ರ ನೀಡಿದ ಸಂಚಾರಿ ಪೊಲೀಸರು

ಪುತ್ತೂರು: ಹೆಲ್ಮೆಟ್ ಧರಿಸದೆ ಹಾಗೂ ಅರ್ಧ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಸವಾರರಿಗೆ ದಂಢ ಹಾಕುವ ಬದಲು ಸವಾರರಿಗೆ ಸಂಚಾರಿ ಪೊಲೀಸರು ಹೂ ನೀಡಿ, ಹೆಲ್ಮೆಟ್ ತೊಡಿಸಿ ಬುದ್ದಿಮಾತು ಹೇಳಿರುವ ವಿನೂತನ ಪ್ರಯೋಗ ಜ.17ರಂದು ಇಲ್ಲಿನ ಬಸ್ ನಿಲ್ದಾಣದ ಬಳಿ ನಡೆಯಿತು.

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂತಿಮ ದಿನದ ಅಂಗವಾಗಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ಬಸ್ ನಿಲ್ದಾಣ ಬಳಿಯ ಗಾಂಧಿಕಟ್ಟೆಯ ಮುಂಭಾಗದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ರಸ್ತೆಯ ಮೂಲಕ ಅರ್ಧ ಹೆಲ್ಟೆಟ್ ಹಾಗೂ ಹೆಲ್ಮೆಟ್ ಧರಿಸದೇ ಬಂದ ದ್ವಿಚಕ್ರ ಸವಾರರನ್ನು ನಿಲ್ಲಿಸಿದ ಪೊಲೀಸರು ಅವರಿಗೆ ಯಾವುದೇ ರೀತಿಯ ದಂಡ ಹಾಕದೇ ಅದರ ಬದಲಿಗೆ ನಗರ ಠಾಣಾ ಇನ್ಸ್‍ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಸಂಚಾರಿ ಠಾಣಾ ಸಬ್ ಇನ್ಸ್‍ಪೆಕ್ಟರ್ ಚೆಲುವಯ್ಯ ಹಾಗೂ ಸಿಬಂದಿಗಳು ಸವಾರರಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ ಬಳಿಕ ಹೊಸ ಹೆಲ್ಮೆಟ್‍ನ್ನು ಅವರ ತಲೆಗೆ ತೊಡಸಿ ರಸ್ತೆ ಸುರಕ್ಷತಾ ನಿಯಮಗಳ ಕರಪತ್ರ ನೀಡಿ ಹೆಲ್ಮೆಟ್ ಧರಿಸುವ ಆವಶ್ಯಕತೆಯ ಬಗ್ಗೆ ಬುದ್ದಿಮಾತು ಹೇಳಿ ಕಳುಹಿಸಿಕೊಡಲಾಯಿತು. ಒಟ್ಟು 10 ಮಂದಿ ಸವಾರರಿಗೆ ಹೂ, ಹೆಲ್ಮೆಟ್ ನೀಡಿ ಬುದ್ದಿಮಾತು ಹೇಳಿ ಕಳುಹಿಸಿಕೊಡಲಾಯಿತು.

ರಸ್ತೆ ಸುರಕ್ಷತಾ ಸಪ್ತಾಹದ ಮಾತನಾಡಿದ ನಗರ ಠಾಣಾ ಇನ್ಸ್‍ಪೆಕ್ಟರ್ ತಿಮ್ಮಪ್ಪ ನಾಯ್ಕ, ಹೆಲ್ಮೆಟ್ ನಮ್ಮ ಜೀವ ರಕ್ಷಣೆಗಿರುವುದು. ಅದು ಬೈಕ್‍ನ ಹ್ಯಾಂಡಲ್‍ನಲ್ಲಿ ನೇತಾಡಿಸಲು ಅಲ್ಲ. ಕಾಟಾಚಾರಕ್ಕೆ ಹೆಲ್ಮೆಟ್ ಧರಿಸಬೇಡಿ. ಅದು ನಿಮ್ಮ ಒಳಿತಿಗಾಗಿ, ನಿಮ್ಮನ್ನು ನಂಬಿ ಬದುಕಿರುವ ಕುಟುಂಬದ ಒಳಿತಿಗಾಗಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿಯೇ ಬೈಕ್ ಚಾಲನೆ ಮಾಡಬೇಕು. ಸಂಚಾರ ನಿಯಮ ಉಲ್ಲಂಘನೆಯಿಂದಲೇ ಬಹುತೇಕ ಅಪಘಾತಗಳು ನಡೆಯುತ್ತಿದೆ. ಹೆಲ್ಮೆಟ್ ಇಲ್ಲದೆಯೇ ಅನಾಹುತಗಳು ಸಂಬವಿಸಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲನೆ ಮಾಡುವಂತೆ ಅವರು ತಿಳಿಸಿದರು.ಸಂಚಾರಿ ಠಾಣಾ ಉಪನಿರೀಕ್ಷಕ ಚೆಲುವಯ್ಯ ಮಾತನಾಡಿ, ಪ್ರತಿಯೊಬ್ಬರ ಜೀವ ಅಮೂಲ್ಯವಾದುದು. ನಿಮ್ಮ ಜೀವ ಉಳಿಸುವ ಹೊಣೆ ನಿಮ್ಮ ಕೈಯಲ್ಲಿದೆ. ಇದಕ್ಕಾಗಿ ಪ್ರತಿ ಸಂದರ್ಭದಲ್ಲಿಯೂ ಹೆಲ್ಮೆಟ್ ಧರಿಸಿಯೇ ಬೈಕ್ ಚಲಾಯಿಸಬೇಕು ಎಂದು ಹೇಳಿದರು. ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನಗರ ಸಭಾ ಸದಸ್ಯ ಬಾಲಚಂದ್ರ, ಮಂಗಳೂರು ಬ್ಲಡ್ ಡೋನರ್ಸ್‍ನ ಕಾರ್ಯವಾಹಕ ಇಮ್ರಾನ್ ಉಪ್ಪಿನಂಗಡಿ, ಬ್ಲಡ್ ಡೋನರ್ಸ್‍ನ ಪೋಷಕ ಮಹಮ್ಮದ್ ಸಲೀಮ್, ಪದಾಧಿಕಾರಿಗಳು, ಸದಸ್ಯರು ಹಾಗೂ ಪೊಲೀಸ್ ಸಿಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಜಾಕ್ ಸಾಲ್ಮರ ಸ್ವಾಗತಿಸಿ, ವಂದಿಸಿದರು.

Related posts

Leave a Reply

Your email address will not be published. Required fields are marked *