Header Ads
Header Ads
Breaking News

90 ರ ಇಳಿವಯಸ್ಸಿನ ಉತ್ಸಾಹದ ಚಿಲುಮೆ – ಸುಶೀಲಮ್ಮ

ಇಂದು ಜೀವನೋಪಾಯಕ್ಕಾಗಿ ವೃತ್ತಿಗಾಗಿ ಅಲೆಯುವವರು ಒಂದೆಡೆಯಾದರೆ, ಇರುವ ವೃತ್ತಿಯಲ್ಲಿ ಸಂತಸವಿಲ್ಲದೆ ಹಲುಬುವವರು ಹಲವರು. ಆದರೆ ವೃತ್ತಿಯಿಂದ ನಿವೃತ್ತಿಯಾಗಿ ನೆಮ್ಮದಿಯ ಜೀವನ ನಡೆಸಬೇಕಾದ ಹೊತ್ತಿನಲ್ಲೂ ದುಡಿಯುವ ಅನಿವಾರ್ಯತೆಗೆ ಸಿಲುಕುವ ಜೀವಗಳೂ ಹಲವು. ಧರ್ಮಸ್ಥಳ ಸಮೀಪದಲ್ಲಿ90 ರ ಇಳಿವಯಸ್ಸಿನಲ್ಲೂ ಚಿಕ್ಕ ಅಂಗಡಿಯೊಂದನ್ನು ನಡೆಸುತ್ತಾ ಜೀವನ ಸಾಗಿಸುತ್ತಿರುವ ಸುಶೀಲಮ್ಮನವರದೂ ಇದೇ ಕಥೆ.ಸುಶೀಲಮ್ಮನವರ ದಿನಚರಿ ಪ್ರಾರಂಭವಾಗೋದು ಬೆಳಗ್ಗಿನ ಜಾವ 5ಗಂಟೆಗೆ. ತಮ್ಮ ಪುಟ್ಟ ಅಂಗಡಿಯಲ್ಲಿ ದೇವರ ಫೋಟೋ, ಪೂಜಾ ಸಾಮಗ್ರಿಗಳನ್ನು ಭಕ್ತರಿಗೆ ಮಾರುತ್ತಾ ತಮ್ಮ ದೈನಂದಿನ ಖರ್ಚನ್ನು ತಾವೇ ನಿಭಾಯಿಸುತ್ತಿರುವ ಛಲಗಾತಿ ಇವರು. ತಡರಾತ್ರಿಯವರೆಗೂ ಅಂಗಡಿ ತೆರೆದಿಟ್ಟು ಗ್ರಾಹಕರಿಗಾಗಿ ಕಾಯುವ ಸುಶೀಲಮ್ಮನವರ ಕಣ್ಣಲ್ಲಿ ಇಂದಿಗೂ ಆತ್ಮವಿಶ್ವಾಸದ ಬೆಳಕಿದೆ.

60 ವರ್ಷಗಳ ಹಿಂದೆ ತಮ್ಮ ಪತಿ ವೆಂಕಟೇಶರೊಂದಿಗೆ ಧರ್ಮಸ್ಥಳಕ್ಕೆ ಬಂದಾಗ ಪ್ರಾರಂಭಿಸಿದ ಈ ಅಂಗಡಿ ಸುಶೀಲಮ್ಮನವರ ಏಕೈಕ ಆಸ್ತಿ. ಅವರ ಪತಿ ದೇವರ ಚಿತ್ರಗಳನ್ನು ರಚಿಸಿ, ಬಣ್ಣ ತುಂಬಿ ಅವುಗಳಿಗೆ ಫ್ರೇಮ್ ಹಾಕಿ ಮಾರಾಟ ಮಾಡುತ್ತಿದ್ದ ದಿನಗಳಿಂದ ಇಂದಿನವರೆಗೂ ದೇವರ ಚಿತ್ರಗಳನ್ನು ಮಾರುವುದನ್ನೆ ನೆಚ್ಚಿಕೊಂಡಿದ್ದಾರೆ. ಜೊತೆಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಎಣ್ಣೆ, ಬತ್ತಿ, ದೀಪಗಳಂತಹ ಪೂಜಾ ಸಾಮಗ್ರಿಗಳು, ದೃಷ್ಟಿದಾರ, ಸರ ಇತ್ಯಾದಿ ವಸ್ತುಗಳನ್ನು ತಿರುಪತಿಯಿಂದ ತರಿಸಿಕೊಂಡು ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುತ್ತಾರೆ.ಪತಿಯ ಮರಣಾನಂತರ ತಮ್ಮ ಮಕ್ಕಳಿಗೆ ಹೊರೆಯಾಗಿ ಬದುಕುವ ಇಚ್ಛೆಯಿಲ್ಲದೇ ಇಂದಿಗೂ ತಮ್ಮ ಅನ್ನವನ್ನು ತಾವೇ ದುಡಿಯುತ್ತಾ ಬದುಕುತ್ತಿದ್ದಾರೆ ಸುಶೀಲಮ್ಮ. ತಮ್ಮ ಅಂಗಡಿಯ ಹಿಂದಿರುವ ಪುಟ್ಟ ಕೋಣೆಯಲ್ಲೇ ವಾಸ ಮಾಡುತ್ತಿರುವ ಸುಶೀಲಮ್ಮನವರಿಗೆ ಸ್ವಂತ ಮನೆಯ ಕನಸಿದೆ. ಅದನ್ನು ಸಾಕಾರಗೊಳಿಸುತ್ತೇನೆಂಬ ಆತ್ಮವಿಶ್ವಾಸದ ಜೊತೆಗೆ ಅದಮ್ಯ ಜೀವನೋತ್ಸಾಹವಿದೆ.

ಸಣ್ಣ-ಪುಟ್ಟ ವಿಷಯಕ್ಕೂ ಹತಾಶರಾಗುವ ಇಂದಿನ ಪೀಳಿಗೆ ಇವರಿಂದ ಕಲಿಯೋದು ಬಹಳಷ್ಟಿದೆ. ಆಗಾಗ ಆರೋಗ್ಯ ಸಮಸ್ಯೆ ಕಾಡಿದರೂ, ಅಂಗಡಿ ಮುಚ್ಚದೇ, ವ್ಯಾಪಾರ ನಡೆಸುತ್ತಲೇ ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ಪೂರೈಸುತ್ತಿರುವ ಸುಶೀಲಮ್ಮನವರ ಬದುಕು ಸ್ಫೂರ್ತಿದಾಯಕವೂ ಹೌದು.
***
ಚಿತ್ರ – ವರದಿ: ಚೈತ್ರಾ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್.ಡಿ.ಎಂ ಕಾಲೇಜು, ಉಜಿರೆ

Related posts

Leave a Reply

Your email address will not be published. Required fields are marked *