Header Ads
Header Ads
Breaking News

ಉಪಯೋಗವಿಲ್ಲದ ಅಂದ್ರಟ್ಟ ಕಿಂಡಿ ಅಣೆಕಟ್ಟು : ಸ್ಥಳೀಯ ಜನತೆಯ ಪಾಲಿಗೆ ಮೃತ್ಯುಕಂಟಕ

ನೀರಾವರಿ ಉದ್ದೇಶಕ್ಕಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟೊಂದು ಈಗ ಯಾವುದೇ ಪ್ರಯೋಜನವೂ ಇಲ್ಲದೆ ಜನತೆಯ ಪಾಲಿಗೆ ಅಪಾಯ ಉಂಟು ಮಾಡುವ ಸ್ಥಿತಿಯಲ್ಲಿದೆ. ಕೃಷಿಕರ ಪಾಲಿಗೆ ನೀರು ಒದಗಿಸುವ ಹಿನ್ನಲೆಯಿಂದ ಸುಮಾರು 70 ವರ್ಷಗಳ ಹಿಂದೆ ಅಂದ್ರಟ್ಟ ಹೊಳೆಗೆ ನಿರ್ಮಿಸಲಾದ ಈ ಅಣೆಕಟ್ಟು ಪ್ರಸ್ತುತ ಊಟಕ್ಕಿಲ್ಲದ ಉಪ್ಪಿನಕಾಯಿ. ಆದರೆ ಈ ಭಾಗದ ಜನತೆಯ ಪಾಲಿಗೆ ಮೃತ್ಯುಕಂಟಕ ದಾರಿ.

ಹೌದು.. ಕೋಟಿಕಟ್ಟ ಎಂಬ ಜಾಗದಲ್ಲಿ ನಿರ್ಮಿಸಲಾದ ಈ ಅಣೆಕಟ್ಟು ಈಗ ಅಂದ್ರಟ್ಟ ಅಣೆಕಟ್ಟು ಎಂದೇ ಪ್ರಸಿದ್ಧಿ. ಕೆಲವು ದಿನಗಳ ಹಿಂದೆ ಇದೇ ಕಿಂಡಿಅಣೆಕಟ್ಟಿನಲ್ಲಿ ಹಾದುಹೋಗುತ್ತಿದ್ದಾಗ ಕೂಲಿಕಾರ್ಮಿಕರೊಬ್ಬರು ಹೊಳೆಗೆ ಬಿದ್ದು ತಮ್ಮ ಜೀವ ಕಳೆದುಕೊಂಡಿದ್ದರು.
ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ -ಆನಡ್ಕ-ದಾಸರಮೂಲೆ ಹಾಗೂ ಪಂಜಿಗ ಎಂಬ ಪ್ರದೇಶಗಳನ್ನು ಒಂದು ಭಾಗದಿಂದ ಸಂಪರ್ಕಿಸುವ ಕಿಂಡಿ ಅಣೆಕಟ್ಟಿನ ಮೇಲುಭಾಗದಲ್ಲಿ ಕಿರಿದಾದ ದಾರಿ ಇದೆ. ಇದಕ್ಕೆ ಯಾವುದೇ ತಡೆಗೋಡೆ ಇಲ್ಲ.

ನೆರೆ ಬಂದಾಗ ಇಲ್ಲಿಂದ ನೂರಾರು ಶಾಲಾ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು ತಮ್ಮ ಜೀವ ಒತ್ತೆ ಇಟ್ಟು ಅಣೆಕಟ್ಟಿನ ಮೇಲೆ ಹಾದುಹೋಗುತ್ತಾರೆ. ಇಂತಹ ಸಂದರ್ಭದಲ್ಲಿಯೇ ಕೂಲಿ ಕಾರ್ಮಿಕ ಜೀವ ತೆತ್ತಿದ್ದರು.ಈ ಅಂದ್ರಟ್ಟ ಕಿಂಡಿಅಣೆಕಟ್ಟು ಸುಮಾರು ೩೦೦ಕ್ಕೂ ಹೆಚ್ಚು ಕುಟುಂಬಗಳಿಗೆ ನಿತ್ಯದ ಹಾದಿ. ಕಾಲುದಾರಿಯಷ್ಟು ಗಾತ್ರದ ಕಿಂಡಿಅಣೆಕಟ್ಟಿನ ಮೇಲೆ ಈ ಜನತೆಯ ಸವಾರಿ. ಮಳೆಗಾಲದಲ್ಲಿ ಅಪಾಯದ ಮಟ್ಟ ಮೀರಿ ಹರಿಯುವ ಈ ಹೊಳೆಯ ದಾರಿಯೊಂದೆ ಇಲ್ಲಿನ ಜನತೆಗೆ ಸಂಚರಿಸಲು ಇರುವ ಏಕೈಕ ದಾರಿಯಾಗಿದೆ. ಹಾಗಾಗಿ ಮಳೆಗಾಲದ ನೆರೆ ಸಂದರ್ಭ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ ಬೇರೆ ಅವಕಾಶವೇ ಇಲ್ಲದೆ ಇದೇ ದಾರಿಯಲ್ಲಿ ಸಾಗುವ ಅನಿವಾರ್ಯತೆ ಇವರದ್ದಾಗಿದೆ.

ಅಂದ್ರಟ್ಟ ಕಿಂಡಿ ಅಣೆಕಟ್ಟಿನಿಂದ ಪುತ್ತೂರು ನಗರಕ್ಕೆ ಬರಲು ಅತ್ಯಂತ ಸಮೀಪದ ದಾರಿ ಇದಾಗಿದ್ದು, ಇಲ್ಲಿನ ನೂರಾರು ಶಾಲಾ ಕಾಲೇಜು ವಿದ್ಯಾಥಿಗಳು ಇದೇ ದಾರಿಯನ್ನು ವರ್ಷವಿಡೀ ಅವಲಂಬಿಸುತ್ತಾರೆ. ಸುಮಾರು10 ಕಿಮೀ ದೂರದ ಪುರುಷರಕಟ್ಟೆ ಎಂಬಲ್ಲಿಯಿಂದ ಪುತ್ತೂರು ನಗರಕ್ಕೆ ಬರುವ ಅವಕಾಶ ಇದೆಯಾದರೂ ಆರ್ಥಿಕ ಸಮಸ್ಯೆಯ ಬಡಕುಟುಂಬದ ಈ ವಿದ್ಯಾರ್ಥಿಗಳು ಹತ್ತಿರದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಸ್ಥಳೀಯರ ಮನವಿ ಆಧಾರದಲ್ಲಿ ಅಗಲ ಕಿರಿದಾದ ಈ ಕಿಂಡಿ ಅಣೆಕಟ್ಟನ್ನು ಕಳೆದ13 ವರ್ಷಗಳ ಹಿಂದೆ ಬನ್ನೂರು, ಚಿಕ್ಕಮುಡ್ನೂರು ಗ್ರಾಮ ಪಂಚಾಯಿತಿ ವತಿಯಿಂದ ಸ್ವಲ್ಪ ಮಟ್ಟಿಗೆ ಅಗಲ ಜಾಸ್ತಿ ಮಾಡಿರುವುದನ್ನು ಬಿಟ್ಟರೆ ಇಲ್ಲಿನ ಸಮಸ್ಯೆ ಬಗ್ಗೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ.

ಈ ಕಿಂಡಿಅಣೆಕಟ್ಟಿನ ದಾರಿಯಲ್ಲಿ ಹಾದು ಹೋಗುವಾಗ ಕೂಲಿಕಾರ್ಮಿಕರೊಬ್ಬರ ಜೀವಹಾನಿಯಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೇತುವೆ ರಚನೆ ಮಾಡುವುದಾದರೆ ಜಾಗ ಬಿಟ್ಟುಕೊಡಲು ದಾನಿಗಳು ಮುಂದೆ ಬಂದಿದ್ದಾರೆ. ನಮಗೊಂದು ಶಾಶ್ವತ ಪರಿಹಾರಬೇಕು ಎನ್ನುವುದು ಸ್ಥಳೀಯರಾದ ಆನಂದ ಗೌಡ ಅವರ ಆಗ್ರಹವಾಗಿದೆ.

Related posts

Leave a Reply

Your email address will not be published. Required fields are marked *