
ಕರ್ನಾಟಕ ರಾಜ್ಯದ ರೈತರ ಜೀವನಾಡಿ ಸಂಸ್ಥೆಯಾದ ಕರ್ನಾಟಕ ಹಾಲು ಮಹಾ ಮಂಡಳಿಯು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭ ಸಂದರ್ಭದಲ್ಲಿ ಗ್ರಾಹಕ ಸ್ನೇಹಿ “ಸಿಹಿ ಉತ್ಸವ”ಯೋಜನೆಯನ್ನು ಕರ್ನಾಟಕ ರಾಜ್ಯಾದ್ಯಂತ ಡಿಸೆಂಬರ್ 24ರಿಂದ ಜನವರಿ 07 ರವರೆಗೆ ಆಚರಿಸಲಾಗಿದೆ. ಸಂಕ್ರಾತಿ ಹಬ್ಬದ ನಿಮಿತ್ತ ಗ್ರಾಹಕರ ಆಪೇಕ್ಷೆ ಮೇರೆಗೆ ನಂದಿನಿ ಸಿಹಿ ಉತ್ಸವವನ್ನು ದಿನಾಂಕ ಜನವರಿ 14ರವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಡಿಸೆಂಬರ್ 24, 2020ರಿಂದ ಫೆಬ್ರವರಿ 06, 2021ರವರೆಗೆ ನಂದಿನಿ ಚೀಸ್ ಫೆಸ್ಟನ್ನು ಆಚರಿಸಲಾಗುತ್ತಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿರುತ್ತದೆ. ನಂದಿನಿ ಸಿಹಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸದೇ ಗರಿಷ್ಠ ಮಾರಾಟದರದಲ್ಲಿ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ನಂದಿನಿ ವಿವಿಧ ಶ್ರೇಣಿಯ ಸಿಹಿ ಉತ್ಪನ್ನಗಳು ರಾಜ್ಯಾದ್ಯಂತ ಇರುವ ನಂದಿನಿ ಡೀಲರ್ ಕೇಂದ್ರಗಳಲ್ಲಿ, ನಂದಿನಿ ಪಾರ್ಲರ್/ ಫ್ರಾಂಚೈಸಿಗಳಲ್ಲಿ ದೊರಕಲಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಹಕರಿಗೆ ಒಕ್ಕೂಟದ ವತಿಯಿಂದ “ನಂದಿನಿ ಆನ್ ವೀಲ್ಸ್” ವಾಹನದಲ್ಲೂ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.
“ನಂದಿನಿ” ಗ್ರಾಹಕರ ಅಚ್ಚುಮೆಚ್ಚಿನ ಬ್ರಾಂಡ್ ಆಗಿದ್ದು, ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಒದಗಿಸುತ್ತಿದೆ. ನಂದಿನಿ ಸಿಹಿ ಉತ್ಪನ್ನಗಳ ಖರೀದಿಯೊಂದಿಗೆ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿ ಆಚರಿಸುವ ಮೂಲಕ ಸ್ಥಳೀಯ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆಯವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.