Header Ads
Breaking News

ಮಂಗಳೂರು ಪಾಲಿಕೆಯ 2021-22ನೇ ಸಾಲಿನ ಅಯವ್ಯಯ ಮಂಡನೆ

ಮಂಗಳೂರು ಮಹಾನಗರ ಪಾಲಿಕೆಯ 2021-2022ನೇ ಸಾಲಿನ ಬಜೆಟ್ ಮಂಡನೆ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಜರುಗಿತು. ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ, ಸ್ವಚ್ಛತೆ ಮತ್ತು ಶುಚಿಗೆ ಹೆಚ್ಚು ಒತ್ತು. ಕಲ್ಯಾಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನವನ್ನು ಕೊಡಲಾಗಿದೆ ಎಂದು ತೆರಿಗೆ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಿರಣ್ ಕುಮಾರ್ ಹೇಳಿದರು.

ಅವರು 2021-22ನೇ ಸಾಲಿನ ಅಯವ್ಯಯದ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. 2021-2022ನೇ ಸಾಲಿನ ಪ್ರಾರಂಭಿಕ ಶಿಲ್ಕು 283.53 ಕೋಟಿ ಮತ್ತು ಆದಾಯ 609.92 ಕೋಟಿಯಾಗಿದ್ದು, 893.45 ಕೋಟಿ ನಿರೀಕ್ಷಿಸಲಾಗಿದೆ. ಒಟ್ಟು ವೆಚ್ಚ 576.28 ಕೋಟಿಗಳೆಂದು ಅಂದಾಜಿಸಲಾಗಿದ್ದು, ಅಂತಿಮ ಶಿಲ್ಕು 317.18 ಕೋಟಿ ನಿರೀಕ್ಷಿಸಲಾಗಿದೆ. ಇನ್ನು ಅಯವ್ಯಯದ ದೃಷ್ಠಿಕೋನ ಬಗ್ಗೆ ಮಾಹಿತಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪುರ್ಣಗೊಳಿಸಲು ಆದ್ಯತೆ, ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಹೆಚ್ಚಿನ ಅದ್ಯತೆಯನ್ನು ನೀಡಲಾಗಿದೆ.ಆಸ್ತಿ ತೆರಿಗೆಯು ಆದಾಯದ ಪ್ರಮುಖವಾದ ಮೂಲವಾಗಿದ್ದು, ಅಂದಾಜು 2,05,003 ಹೆಚ್ಚು ಆಸ್ತಿಗಳನ್ನು ಗುರುತಿಸಲಾಗಿದ್ದು, ಇನ್ನೂ ಕೈತಪ್ಪಿರುವ ಆಸ್ತಿಗಳನ್ನು ಗುರುತಿಸಿ ಆಸ್ತಿ ಜಾಗದ ವ್ಯಾಪ್ತಿಗೆ ಒಳಪಡಿಸಿ ಸಂಪನ್ಮೂಲಗಳನ್ನು ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಈಗಾಗಲೇ ಆಸ್ತಿ ಸಮೀಕ್ಷೆ ಪ್ರಾರಂಭವಾಗಿದ್ದು, ಮುಂದಿನ ಆರ್ಥಿಕ ವರ್ಷದಿಂದ ಆನ್‍ಲೈನ್ ಸೇವೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಉಪ ಆಯುಕ್ತರವರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತ ದಳ ಸ್ಥಾಪಿಸಿ ಪಾಲಿಕೆಯ ಸಂಪನ್ಮೂಲ ಸೋರಿಕೆಯ ಪ್ರಕರಣಗಳನ್ನು ಪತ್ತೆ ಹಚ್ಚುವುದರ ಮೂಲಕ ತೆರಿಗೆ ಮತ್ತು ತೆರಿಗೇತರ ಆದಾಯವನ್ನು ಹೆಚ್ಚಿಲಸು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ನೀರು ಬಳಕೆದಾರರಿಗೆ ಪ್ರತಿ ತಿಂಗಳು ನಿರಂತರವಾಗಿ ಬಿಲ್ಲು ಸಾರ್ವಜನಿಕರಿಗೆ ನೀಡಲು ಕ್ರಮವಹಿಸಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ನೀರಿನ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಇದರಿಂದ ಪಾಲಿಕೆಗೆ ಹೆಚ್ಚುವರಿ ಆದಾಯ ನಿರೀಕ್ಷಿಲಸಾಗಿದೆ. ಘನತ್ಯಾಜ್ಯ ವಸ್ತುಗಳ ನಿಯಮ 2016ರನ್ನು ಅನುಷ್ಠಾನಗೊಳಿಸಲು ಪ್ರತಿ ಮನೆಗಳಲ್ಲಿ ಅಪಾರ್ಟ್‍ಮೆಂಟ್‍ಗಳಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರು ಹಾಗೂ ಇತರರು ತಮ್ಮ ಹಂತದಲ್ಲಿಯೇ ಹಸಿಕಸವನ್ನು ವಿಂಗಡಿಸಿ ಸಂಸ್ಕರಣೆ ಮಾಡಿದಲ್ಲಿ ಆಸ್ತಿ ತೆರಿಗೆಯ ಹಾಗೂ ಉದ್ದಿಮೆ ಪರವಾನಗಿ ಘನತ್ಯಾಜ್ಯ ಸೇವಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.ಮಂಗಳೂರು ನಗರ ಸಾಂಸ್ಕøತಿಕ ಪರಪಂರೆಯನ್ನು ಉಳಿಸಿ ಬೆಳೆಸಲು ಉತ್ತೇಜಿಸಸಲು ಯಕ್ಷಗಾನ, ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು 15 ಲಕ್ಷಗಳನ್ನು ಹಾಗೂ ವಿವಿಧ ರಂಗದ ಕ್ರೀಡೆಗಳಿಗೆ ಪ್ರೋತ್ಸಾಹಿಸಲು 25 ಲಕ್ಷಗಳನ್ನು ಈ ಅಯವ್ಯಯದಲ್ಲಿ ಮೀಸಲಿರಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗದ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಕುಟೀರ ಭಾಗ್ಯ ಯೋಜನೆ ಅಡಿಯಲ್ಲಿ ಮನೆ ದುರಸ್ತಿಗೆ 20,000 ರೂ. ಸಹಾಯಧನದಿಂದ 25 ಸಾವಿರ ರೂಗೆ ಹೆಚ್ಚಿಲಸಾಗಿದೆ. ಕುಟೀರ ಜ್ಯೋತಿ ಯೋಜನೆಯನ್ನು ಮುಂದುವರಿಸಲಾಗಿದ್ದು, ಅಯವ್ಯಯದಲ್ಲಿ 1.62 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ಈ ಸಂದರ್ಭ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ್, ಉಪಮೇಯರ್ ವೇದಾವತಿ, ಪಾಲಿಕೆಯ ಕಮಿಶನರ್ ಅಕ್ಷಯ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *