Header Ads
Header Ads
Breaking News

ರೈ ವಿರುದ್ಧ ಒಂದೇ ಒಂದು ಕಾನೂನು ಬಾಹಿರ ಚಟುವಟಿಕೆಯ ಸಾಕ್ಷಿ ಕೊಡಿ : ರಾಜಕೀಯ ಸನ್ಯಾಸ ಸ್ವೀಕರಿಸುತ್ತೇವೆ : ಕಾವು ಹೇಮನಾಥ ಶೆಟ್ಟಿ ಹೇಳಿಕೆ

ಪುತ್ತೂರು: ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕೊಲೆ, ಕೊಲೆ ಯತ್ನ, ಅಪರಾಧ, ಕೋಮು ಗಲಭೆಯಲ್ಲಿ ಪಾತ್ರ ನಿರ್ವಹಿಸಿದ್ದಾರೆ ಎಂಬ ಒಂದೇ ಒಂದು ಸಾಕ್ಷಿ ಕೊಟ್ಟರೂ ನಾವೆಲ್ಲ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರಮಾನಾಥ ರೈ ಅವರು ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಬಗ್ಗೆ ನೀಡಿದ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅದನ್ನು ಸಮರ್ಥಿಸಿಕೊಳ್ಳುತ್ತೇವೆ. ನಿಜ ಹೇಳಬೇಕೆಂದರೆ ಕಲ್ಲಡ್ಕ ಡಾ. ಪ್ರಭಾಕರ ಭಟ್ ಸೇರಿದಂತೆ ಕೋಮು ಪ್ರಚೋದನೆ ಮಾಡುವವರ ವಿರುದ್ಧ ರಮಾನಾಥ ರೈ ಅವರು ಮೊದಲೇ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಹಾಗೆ ಮಾಡಿದ್ದರೆ ಇಂದು ಕಲ್ಲಡ್ಕದಂಥ ಘಟನೆಗಳು ನಡೆಯುತ್ತಲೇ ಇರಲಿಲ್ಲ ಎಂದರು.
ಬಿಜೆಪಿ, ಸಂಘ ಪರಿವಾರ ನಾಯಕರು ಕೋಮು ಭಾವನೆ ಕೆರಳಿಸಿಯೇ ಬೆಳೆದವರು. ಶಾಸಕರಾಗುವ ಮೊದಲು ಡಿ.ವಿ. ಸದಾನಂದ ಗೌಡರು ಸುಳ್ಯದಲ್ಲಿ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಹೋದಲ್ಲೆಲ್ಲ ಧರ್ಮ ಧರ್ಮಗಳ ಮಧ್ಯೆ ಸಾಮರಸ್ಯ ಕೆಡಿಸುವ ಭಾಷಣ ಮಾಡಿಯೇ ಬೆಳೆದವರು. ಇತ್ತೀಚೆಗೆ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆಯನ್ನೂ ನೀಡಿದವರು. ಇಂಥವರು ಈಗ ರಮಾನಾಥ ರೈ ರಾಜೀನಾಮೆ ಕೇಳುತ್ತಿದ್ದಾರೆ. ತನ್ನ ರಾಜಕೀಯ ಜೀವನದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಒಂದೇ ಒಂದು ಕೆಲಸ ಮಾಡದ ರಮಾನಾಥ ರೈ ಅವರ ರಾಜೀನಾಮೆ ಕೇಳುವ ಹಕ್ಕು ಇವರ‍್ಯಾರಿಗೂ ಇಲ್ಲ ಎಮದು ನುಡಿದರು.
ಜಿಲ್ಲೆಯಲ್ಲಿ ಹಿಂದೂ ಸಹೋದರರ ಹತ್ಯೆ ನಡೆದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವಾ? ಅದಕ್ಕೆ ಸಂಘ ಪರಿವಾರದ ಕೋಮು ಎಜೆಂಡಾವೇ ಕಾರಣ. ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಕೊಲೆ ಮಾಡಿದ್ದು ಯಾರು? ಮಂಗಳೂರಿನಲ್ಲಿ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದ ಒಳ ಮರ್ಮವೇನು ಎಂದು ಪ್ರಶ್ನಿಸಿದ ಅವರು, ಕಾರ್ತಿಕ್ ರಾಜ್ ಕೊಲೆಯಲ್ಲಿ ಕೋಮು ವಿಷಯ ತಂದ ಬಿಜೆಪಿ ನಾಯಕರಿಗೆ ಮುಖಭಂಗವಾಗಿದ್ದನ್ನು ಜನ ಮರೆತಿಲ್ಲ. ಚುನಾವಣೆ ಬಂದಾಗ ಹಿಂದೂ ಸಮಾಜೋತ್ಸವ ಮಾಡುವುದು, ಉದ್ರೇಕಕಾರಿ ಭಾಷಣ ಮಾಡುವುದು, ಜನರ ಭಾವನೆ ಕೆರಳಿಸಿ ಮತ ಪಡೆಯುವುದು. ಇದು ಬಿಜೆಪಿ ಅಜೆಂಡಾ. ಅಭಿವೃದ್ಧಿ ಮಾಡುವುದಕ್ಕಿಂತ ಇದು ಸುಲಭ ವಿಭಾನ. ಆದರೆ ಕಾಂಗ್ರೆಸ್ ಯಾವತ್ತೂ ಇಂಥ ರಾಜಕಾರಣ ಮಾಡಿಲ್ಲ ಎಂದವರು ನುಡಿದರು.
ಇನ್ನೇನು ವರ್ಷದೊಳಗೆ ಚುನಾವಣೆ ಬರಲಿದೆ. ಈಗ ಹಿಂದೂಗಳ ಮೇಲೆ ಎಲ್ಲಿಲ್ಲದ ಪ್ರೀತಿ ಬಿಜೆಪಿಗೆ ಹುಟ್ಟಿದೆ. ಮಳೆಗಾಲ ಮುಗಿದ ಕೂಡಲೇ ಸಮಾಜೋತ್ಸವ ಆರಂಭವಾಗಬಹುದು ಎಂದು ಹೇಳಿದ ಅವರು, ಕಲ್ಲಡ್ಕ ಎಂಬ ಹೆಸರು ಕೇಳಿದೊಡನೆ ಭಯ ಹುಟ್ಟಿಸುವ ಸ್ಥಿತಿ ನಿರ್ಮಾಣ ಮಾಡಿದ್ದು ಯಾರು ಎಂಬುದು ಜಿಲ್ಲೆಯ ಜನತೆಗೆ ಗೊತ್ತು. ಇಂಥವರಿಂದ ರಮಾನಾಥ ರೈ ಪಾಠ ಕಲಿಯಬೇಕಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ಲೊಕೇಶ್ ಹೆಗ್ಡೆ, ನಗರಸಭಾ ಸದಸ್ಯ ಮುಕೇಶ್ ಕೆಮ್ಮಿಂಜೆ, ಪಕ್ಷದ ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ರಾಹುಲ್ ಬ್ರಿಗೇಡ್ ಸಂಚಾಲಕ ಅಮರನಾಥ ಗೌಡ ಉಪಸ್ಥಿತರಿದ್ದರು.

Related posts

Leave a Reply