
ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆ ಪ್ರಯುಕ್ತ ‘ಇರುವತ್ತೊಂಜನೇ ಐಸಿರೊ’ ತುಳು ಸಾಹಿತ್ಯ ಸಮ್ಮೇಳನ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ತುಳುವಿನ ಉಳಿವು ನಮ್ಮಿಂದಲೇ ಆಗಬೇಕು. ಆಂಗ್ಲ ವ್ಯಾಮೋಹ ಬಿಟ್ಟು ತುಳುವಿನ ಬಗೆಗಿನ ಒಲವು ಮೂಡಬೇಕು. ನಮ್ಮ ಹಿರಿಯರನ್ನು ಗೌರವಿಸುವ ಕೆಲಸ ನಮ್ಮಿಂದಲೇ ಆಗಬೇಕು. ಒಗ್ಗಟ್ಟಿನಿಂದ ಬದುಕುವ ಮನಸ್ಸು ನಮ್ಮದಾಗಬೇಕು. ಜನರಿಗೆ ಜಾಗೃತಿ ಮೂಡಿಸುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನ ಅತೀ ಅಗತ್ಯವಾಗಿದೆ ಎಂದು ಹೇಳಿದರು.
ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ಭಾಷೆ, ಸಂಸ್ಕೃತಿ ಭಾವನೆಯನ್ನು ಅರಳಿಸುತ್ತದೆ. ತುಳುನಾಡಿನ ಸಂಸ್ಕೃತಿ ಶ್ರೇಷ್ಠವಾದುದು. ನಾವೆಲ್ಲರೂ ತುಳು ಬಾಷೆಯ ಉಳಿವಿಗಾಗಿ ಸಹಕಾರ ಅಗತ್ಯ ಎಂದರು. ಹಿರಿಯ ಸಾಹಿತಿ ಮಲಾರು ಶ್ರೀ ಜಯರಾಮ ರೈರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಷೆ ಎಂಬುದು ಆತ್ಮದ ಸ್ವರ. ಅದು ಮುಂದೊಂದು ದಿನ ಲಿಪಿಯಾಗಿ ಬದಲಾಯಿತು. ಸಾಹಿತ್ಯಕ್ಕೆ ಲಿಪಿ ಮೂಲ. ಬಾಷೆ ಎಂದರೆ ಅದು ಅನರ್ಘ್ಯ ಸಂಪತ್ತು.
ವಿಚಾರ ಯಾವುದೇ ಇದ್ದರು ಮನುಷ್ಯರು ಸತ್ಯ ತಿಳಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರೊ | ವಿ.ಬಿ. ಅರ್ತಿಕಜೆಯವರು ಅನುವಾದ ಮಾಡಿದ ಹನುಮಾನ್ ಚಾಲಿಸ್ ತುಳು ಪುಸ್ತಕ, ಡಾ.ವಸಂತಕುಮಾರ್ ಪೆರ್ಲ ಇವರು ಬರೆದ ‘ಮದಿಪುದ ಪಾತೆರೊಲು’ ತುಳು ಪುಸ್ತಕ ಹಾಗೂ ಮಲಾರು ಜಯರಾಮ ರೈರವರು ಬರೆದ ಕಬೀರೆರೆ ಕಮ್ಮೆನ ತುಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಲಾರು ಶ್ರೀ ಜಯರಾಮ ರೈ ಹಾಗೂ ಅವರ ಪತ್ನಿ ಗೀತಾ ಜಯರಾಮ ರೈರವರುನ್ನು ಸ್ವಾಮೀಜಿಯವರು ಸನ್ಮಾನಿಸಿದರು.
ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕರು, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಪುತ್ತೂರು ವಲಯ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷರಾದ ಡಾ.ತುಕಾರಾಮ ಪೂಜಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ. ಸುರೇಶ್ ರೈ ಮೊದಲಾದವರು ಒಡಿಯೂರು ತುಳುಕೂಟದ ಅಧ್ಯಕ್ಷರಾದ ಯಶವಂತ ವಿಟ್ಲ, ತುಳು ಸಾಹಿತ್ಯ ಸಮ್ಮೇಳನ ಕೂಟದ ಅಧ್ಯಕ್ಷರಾದ ಡಾ. ವಸಂತ ಕುಮಾರ್ ಪೆರ್ಲ, ದೇವಿಪ್ರಸಾದ್ ರೈ ಬೆಜ್ಜ , ಒಡಿಯೂರು ಶ್ರೀ ಗುರುದೇವ ಐಟಿಐ ಕನ್ಯಾನ ಇದರ ಪ್ರಾಚಾರ್ಯರಾದ ಕರುಣಾಕರ ಎನ್.ಬಿ. ಉಪಸ್ಥಿತರಿದ್ದರು.